ADVERTISEMENT

5 ವರ್ಷದಲ್ಲಿ 9.2 ಕೋಟಿ ಉದ್ಯೋಗ ನಷ್ಟ: ವಿಶ್ವ ಆರ್ಥಿಕ ವೇದಿಕೆ ವರದಿ ಬಹಿರಂಗ

ಪಿಟಿಐ
Published 8 ಜನವರಿ 2025, 13:35 IST
Last Updated 8 ಜನವರಿ 2025, 13:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ಮುಂದಿನ ಐದು ವರ್ಷಗಳಲ್ಲಿ ಜಗತ್ತಿನಾದ್ಯಂತ ಹೊಸದಾಗಿ 17 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಆದರೆ, ಇದೇ ಅವಧಿಯಲ್ಲಿ 9.2 ಕೋಟಿ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಒಟ್ಟಾರೆ ಹೊಸದಾಗಿ 7.8 ಕೋಟಿ ಉದ್ಯೋಗಗಳಷ್ಟೇ ಸೃಷ್ಟಿಯಾದಂತೆ ಆಗುತ್ತದೆ’ ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ವರದಿ ತಿಳಿಸಿದೆ.

ದಾವೋಸ್‌ನಲ್ಲಿ ಇದೇ 20ರಿಂದ 25ರ ವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಗೂ ಮೊದಲೇ ಬುಧವಾರ ವರದಿ ಬಿಡುಗಡೆಯಾಗಿದೆ. 

2030ರ ವೇಳೆಗೆ ವಿಶ್ವದಲ್ಲಿ ಕೃಷಿ ಕಾರ್ಮಿಕರು ಮತ್ತು ಚಾಲಕರ ಹುದ್ದೆಗಳ ನೇಮಕಾತಿ ಪ್ರಮಾಣ ಏರಿಕೆಯಾಗಲಿದೆ. ಆದರೆ, ಇದೇ ಅವಧಿಯಲ್ಲಿ ಕ್ಯಾಷಿಯರ್ ಮತ್ತು ಟಿಕೆಟ್‌ ಬುಕಿಂಗ್‌ ಕ್ಷೇತ್ರ ಸೇರಿ ಇತರೆ ವಲಯಗಳಲ್ಲಿ ಉದ್ಯೋಗಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ವಿವರಿಸಿದೆ.

ADVERTISEMENT

ಜಾಗತಿಕ ಮಟ್ಟದಲ್ಲಿ ಅಗಾಧ ಪ್ರಮಾಣದಲ್ಲಿ ತಂತ್ರಜ್ಞಾನದ ಬದಲಾಗುತ್ತಿದೆ. ಜನಸಂಖ್ಯೆಯಲ್ಲಿ ಬದಲಾವಣೆಯಾಗುತ್ತಿದೆ. ಜಾಗತಿಕ ಬಿಕ್ಕಟ್ಟು ಉಲ್ಬಣಿಸಿದೆ. ಇದರಿಂದ ಆರ್ಥಿಕ ಬೆಳವಣಿಗೆಯು ಒತ್ತಡಕ್ಕೆ ಸಿಲುಕಿದೆ. ಹಾಗಾಗಿ, ಕೈಗಾರಿಕೆಗಳು ಮತ್ತು ವೃತ್ತಿಪರ ವಲಯಗಳಲ್ಲಿ ಉದ್ಯೋಗಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಹೇಳಿದೆ.

ಒಂದು ಸಾವಿರಕ್ಕೂ ಹೆಚ್ಚು ಕಂಪನಿಗಳ ದತ್ತಾಂಶ ಕ್ರೋಡೀಕರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ವ್ಯಾಪಾರ ವಿನಿಮಯದ ಹಾದಿಯಲ್ಲಿ ಉದ್ಯೋಗಿಗಳಲ್ಲಿ ಕೌಶಲ ಕೊರತೆ ಇರುವುದು ಈ ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಹೇಳಿದೆ.

ಕೃತಕ ಬುದ್ಧಿಮತ್ತೆ, ದತ್ತಾಂಶ ಸಂಗ್ರಹ ಮತ್ತು ಸೈಬರ್‌ ಭದ್ರತಾ ವಲಯವು ವೇಗವಾಗಿ ಬೆಳವಣಿಗೆ ಸಾಧಿಸಲಿದೆ. ಮಾನವ ಕೌಶಲದಲ್ಲಿನ ಕೊರತೆಯು ಮುಂದುವರಿಯಲಿದೆ. ಆದರೆ, ಉದ್ಯೋಗ ಮಾರುಕಟ್ಟೆಯ ಬದಲಾವಣೆಯಲ್ಲಿ ತಂತ್ರಜ್ಞಾನ ಹಾಗೂ ಮಾನವ ಕೌಶಲವು ನಿರ್ಣಾಯಕವಾಗಿದೆ ಎಂದು ತಿಳಿಸಿದೆ.

ಆರೈಕೆ ಮತ್ತು ಶಿಕ್ಷಣ ವಲಯದಲ್ಲಿ ಅತಿಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಕೃತಕ ಬುದ್ಧಿಮತ್ತೆ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.