ADVERTISEMENT

ವಿಶ್ರಾಂತಿ ಸೌಲಭ್ಯ: ಡಿಜಿಸಿಎ ನಡೆಗೆ ಪೈಲಟ್‌ಗಳ ಆಕ್ಷೇಪ

ಪರಿಷ್ಕೃತ ನಿಯಮ ಜಾರಿ ಮುಂದೂಡಿಕೆ

ಪಿಟಿಐ
Published 30 ಮಾರ್ಚ್ 2024, 15:32 IST
Last Updated 30 ಮಾರ್ಚ್ 2024, 15:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಪೈಲಟ್‌ಗಳ ವಿಶ್ರಾಂತಿಗೆ ಸಂಬಂಧಿಸಿದಂತೆ ರೂಪಿಸಿರುವ ಪರಿಷ್ಕೃತ ನಿಯಮಾವಳಿಗಳ ಅನುಷ್ಠಾನದ ದಿನಾಂಕವನ್ನು ಮುಂದೂಡಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಕ್ರಮಕ್ಕೆ ಭಾರತೀಯ ಪೈಲಟ್‌ಗಳ ಒಕ್ಕೂಟವು (ಎಫ್‌ಐಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದೆ. ವಿಮಾನಯಾನ ಕಂಪನಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಪೈಲಟ್‌ಗಳ ಆರೋಗ್ಯವನ್ನು ಪೂರ್ವಗ್ರಹ‍ಪೀಡಿತವಾಗಿ ನೋಡುವುದು ಸರಿಯಲ್ಲ ಎಂದು ಒಕ್ಕೂಟ ಹೇಳಿದೆ.

ಜೂನ್‌ 1ರಿಂದ ಪರಿಷ್ಕೃತ ನಿಯಮಾವಳಿಗಳನ್ನು ಜಾರಿಗೊಳಿಸುವಂತೆ ಎಲ್ಲಾ ವಿಮಾನಯಾನ ಕಂಪನಿಗಳಿಗೆ ಡಿಜಿಸಿಎ ಈ ಮೊದಲು ಸೂಚಿಸಿತ್ತು. ಆದರೆ, ಮಾರ್ಚ್‌ 26ರಂದು ಜಾರಿಯ ದಿನಾಂಕವನ್ನು ಏಕಾಏಕಿ ಮುಂದೂಡಿದೆ.

ADVERTISEMENT

ಡಿಜಿಸಿಎ ತಳೆದಿರುವ ನಡೆಯು ಪೈಲಟ್‌ಗಳ ಸುರಕ್ಷತೆಗೆ ಅಪಾಯವನ್ನು ಉಂಟು ಮಾಡುತ್ತದೆ. ಅಲ್ಲದೆ, ಪ್ರಯಾಣಿಕರ ಸುರಕ್ಷತೆ ಸಂಬಂಧ ಕೇಂದ್ರ ವಿಮಾನಯಾನ ಸಚಿವಾಲಯವು ಪರಿಷ್ಕರಿಸಿರುವ ನಿಯಮಾವಳಿಗಳ ಅನುಷ್ಠಾನಕ್ಕೂ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ದೂರಿದೆ.

‌ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿಮಾನಯಾನ ಸಚಿವಾಲಯವು ನಾಗರಿಕ ವಿಮಾನಯಾನ ಅಗತ್ಯತೆ ಕುರಿತಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ವಿಮಾನಗಳ ರದ್ದತಿ ಮತ್ತು ವಿಳಂಬದಿಂದ ಸಂಕಷ್ಟ ಅನುಭವಿಸುವ ಪ್ರಯಾಣಿಕರಿಗೆ ಕಂಪನಿಗಳು ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ. ಇಂತಹ ಸಂದರ್ಭದಲ್ಲಿ ಟಿಕೆಟ್‌ನ ಸಂಪೂರ್ಣ ಮೊತ್ತವನ್ನು ಮರುಪಾವತಿಸಬೇಕು ಅಥವಾ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿತ್ತು.

ಪೈಲಟ್‌ಗಳು ಹಾಗೂ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಸೇವೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಐದು ಸಾವಿರಕ್ಕೂ ಹೆಚ್ಚು ಮಂದಿ ಈ ಒಕ್ಕೂಟದ ಸದಸ್ಯರಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.