ADVERTISEMENT

ಆರೋಗ್ಯ ಸೇವೆ ರಾಜ್ಯಗಳ ಪ್ರಾಥಮಿಕ ಜವಾಬ್ದಾರಿ: ಸೋಮನಾಥನ್

ಆರೋಗ್ಯ ಸೇವಾ ವಲಯಕ್ಕೆ ಕೇಂದ್ರ ಬಜೆಟ್ ಅನುದಾನ

ಪಿಟಿಐ
Published 21 ಫೆಬ್ರುವರಿ 2022, 13:39 IST
Last Updated 21 ಫೆಬ್ರುವರಿ 2022, 13:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಆರೋಗ್ಯ ಸೇವಾ ವಲಯಕ್ಕೆ ಕೇಂದ್ರ ಬಜೆಟ್‌ನಲ್ಲಿ ನೀಡಿರುವ ಅನುದಾನವು ನಿರೀಕ್ಷೆಗಿಂತಲೂ ಕಡಿಮೆ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್, ‘ಆರೋಗ್ಯ ಸೇವೆಗಳನ್ನು ಒದಗಿಸುವುದು ರಾಜ್ಯಗಳ ಪ್ರಾಥಮಿಕ ಜವಾಬ್ದಾರಿ’ ಎಂದು ಹೇಳಿದ್ದಾರೆ.

‘ಆರೋಗ್ಯ ಮೂಲಸೌಕರ್ಯಕ್ಕೆ ಕೇಂದ್ರವು ಒಂದಿಷ್ಟು ನೆರವು ನೀಡುತ್ತದೆ. ಅಲ್ಲದೆ, ಸಮಾಜದ ತಳಮಟ್ಟದಲ್ಲಿನ ಜನರಿಗೆ ಆರೋಗ್ಯ ಸೇವೆಗಳನ್ನು ಪಡೆಯಲು ಅನುಕೂಲ ಆಗುವಂತೆ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮೇಲೆ ಸರ್ಕಾರವು ವೆಚ್ಚ ಮಾಡುತ್ತಿದೆ’ ಎಂದು ಬಜೆಟ್‌ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

ಬಜೆಟ್‌ ಪ್ರಸ್ತಾವದ ಪ್ರಕಾರ, 2022–23ನೇ ಹಣಕಾಸು ವರ್ಷಕ್ಕೆ ಆರೋಗ್ಯ ಸೇವಾ ವಲಯಕ್ಕೆ ₹ 83 ಸಾವಿರ ಕೋಟಿ ನಿಗದಿ ಮಾಡಲಾಗಿದೆ. 2021–22ರಲ್ಲಿಯೂ ಇಷ್ಟೇ ಮೊತ್ತ ತೆಗೆದಿಡಲಾಗಿತ್ತು.

ADVERTISEMENT

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಐಐ ಅಧ್ಯಕ್ಷ ಟಿ.ವಿ. ನರೇಂದ್ರನ್‌, ‘ಆರೋಗ್ಯ ಸೇವಾ ವಲಯದ ಮೇಲಿನ ವೆಚ್ಚವು ಹಿಂದೆ ಮಾಡುತ್ತಿದ್ದ ವೆಚ್ಚಕ್ಕಿಂತ ಹೆಚ್ಚಿದೆ. ಜಿಡಿಪಿಯ ಶೇಕಡ 1.3ರಷ್ಟು ಮೊತ್ತ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಹೀಗಿದ್ದರೂ ಸರ್ಕಾರವು ಜಿಡಿಪಿಯ ಶೇ 3ರಷ್ಟನ್ನು ಆರೋಗ್ಯ ಸೇವೆಗಳಿಗಾಗಿ ವೆಚ್ಚ ಮಾಡಬೇಕು ಎನ್ನುವ ನಿರೀಕ್ಷೆಗಳು ಇದ್ದವು’ ಎಂದು ಹೇಳಿದ್ದರು.

‘ವೆಚ್ಚದ ಪ್ರಮಾಣವನ್ನುರಾಜ್ಯ ಸರ್ಕಾರದ ಜವಾಬ್ದಾರಿಯ ಹಿನ್ನೆಲೆಯಲ್ಲಿ ನೋಡಬೇಕು’ ಎಂದು ಸೋಮನಾಥನ್‌ ಪ್ರತಿಕ್ರಿಯೆ ನೀಡಿದರು.

‘ಆರೋಗ್ಯ, ಶಿಕ್ಷಣ, ರಕ್ಷಣೆ ಸೇರಿದಂತೆ ವಿವಿಧ ವಲಯಗಳ ಮೇಲೆ ಮಾಡುವ ವೆಚ್ಚವು ಜಿಡಿಪಿಯ ಶೇಕಡಾವಾರು ಎಷ್ಟಿರಬೇಕು ಎಂದು ಚರ್ಚೆ ನಡೆಸುವಾಗ, ವೆಚ್ಚದ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಆದರೂ ತೆರಿಗೆ–ಜಿಡಿಪಿ ಅನುಪಾತದಲ್ಲಿಯೂ ಅಷ್ಟೇ ಪ್ರಮಾಣದ ಹೆಚ್ಚಳ ಆಗಬೇಕು ಎನ್ನುವುದನ್ನೂ ನಾವು ನೆನಪಿಟ್ಟುಕೊಳ್ಳಬೇಕು. ಅದನ್ನು ಹೆಚ್ಚಿಸುವ ಬಗ್ಗೆಯೂ ಸಹಕಾರ ನೀಡುವಂತೆ ಉದ್ಯಮಕ್ಕೆ ನಾನು ಮನವಿ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಕೋವಿಡ್‌ ಸಾಂಕ್ರಾಮಿಕ ಬಂದ ನಂತರ ಸರ್ಕಾರದ ತುರ್ತು ಸಾಲ ಖಾತರಿ ಯೋಜನೆ ಅಡಿಯಲ್ಲಿ ಆರೋಗ್ಯ ಸೇವಾ ವಲಯಕ್ಕೆ ₹ 50 ಸಾವಿರ ಕೋಟಿ ಸಾಲ ಸಿಗುತ್ತಿದೆ. ಕಾರ್ಪೊರೇಟ್‌ ವಲಯವು ಅದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.