
ಮುಂಬೈ: ದೇಶವು ಹಣಕಾಸಿನ ಒಳಗೊಳ್ಳುವಿಕೆಯ ಗುರಿಯನ್ನು ತಲುಪಲು ಫಿನ್‌ಟೆಕ್ ಕಂಪನಿಗಳು ನೆರವಾಗಬೇಕು, ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ಉತ್ಪನ್ನಗಳನ್ನು ಅವು ರೂಪಿಸಬೇಕು ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಕರೆ ನೀಡಿದ್ದಾರೆ.
ಜಾಗತಿಕ ಫಿನ್‌ಟೆಕ್ ಉತ್ಸವದಲ್ಲಿ ಮಾತನಾಡಿದ ಅವರು, ಡಿಜಿಟಲ್ ವಂಚನೆಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಗ್ರಾಹಕ ಕೇಂದ್ರಿತ ನಡೆಯನ್ನು ಫಿನ್‌ಟೆಕ್ ಕಂಪನಿಗಳು ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು. ‘ಬಳಸಲು ಸುಲಭವಾಗುವ, ಎಲ್ಲರಿಗೂ ಲಭ್ಯವಾಗುವ, ನೆರವಿಗೆ ಬರುವ ತಂತ್ರಜ್ಞಾನವನ್ನು ಹೊಂದಿರುವ ಉತ್ಪನ್ನಗಳನ್ನು ರೂಪಿಸಬೇಕು. ಅಲ್ಲದೆ, ಹಿರಿಯ ನಾಗರಿಕರು, ಕಡಿಮೆ ಮಟ್ಟದ ಡಿಜಿಟಲ್ ಸಾಕ್ಷರತೆ ಇರುವವರಿಗೆ ಇವುಗಳ ಬಳಕೆ ಕಷ್ಟವಾಗುವಂತೆ ಆಗಬಾರದು’ ಎಂದು ಕಿವಿಮಾತು ಹೇಳಿದರು.
ದೇಶದ ಫಿನ್‌ಟೆಕ್ ಕ್ಷೇತ್ರವು ಬಹಳ ಚೈತನ್ಯಶಾಲಿಯಾಗಿದೆ. ಫಿನ್‌ಟೆಕ್ ಉದ್ಯಮವು ಹಣಕಾಸಿನ ಸೇವೆಗಳನ್ನು ದೊಡ್ಡ ಪ್ರಮಾಣದಲ್ಲಿ, ಕಡಿಮೆ ವೆಚ್ಚದಲ್ಲಿ ಒದಗಿಸುವುದನ್ನು ಸಾಧ್ಯವಾಗಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.