
ನವದೆಹಲಿ: ‘ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಅಂದಾಜು ಮಾಡಲಾಗಿರುವ ವಿತ್ತೀಯ ಕೊರತೆಯ ಮಿತಿಯನ್ನು ಕೇಂದ್ರ ಸರ್ಕಾರವು ಮೀರುವುದಿಲ್ಲ ಎಂಬ ನಿರೀಕ್ಷೆ ಇದೆ’ ಎಂದು ಪಿಡಬ್ಲ್ಯುಸಿ ಪಾಲುದಾರ ರಾನೆನ್ ಬ್ಯಾನರ್ಜಿ ಹೇಳಿದ್ದಾರೆ. ಜಿಡಿಪಿಯ ಶೇ 4.4ರಷ್ಟಕ್ಕೆ ವಿತ್ತೀಯ ಕೊರತೆಯನ್ನು ಮಿತಿಗೊಳಿಸುವ ಉದ್ದೇಶವನ್ನು ಕೇಂದ್ರವು ಬಜೆಟ್‌ನಲ್ಲಿ ಹೇಳಿದೆ.
ಇದು ಹಣಕಾಸು ನಿರ್ವಹಣೆಯ ವಿಚಾರವಾಗಿ ದೇಶವು ಹೊಂದಿರುವ ಬದ್ಧತೆಯ ಬಗ್ಗೆ ಜಾಗತಿಕ ಮಟ್ಟದ ಹೂಡಿಕೆದಾರರಿಗೆ ನೀಡಿರುವ ಸಕಾರಾತ್ಮಕ ಸಂದೇಶ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಜಿಡಿಪಿ ಬೆಳವಣಿಗೆಯ ಗುರಿಯನ್ನು (ಹಣದುಬ್ಬರದ ಪರಿಣಾಮವನ್ನು ಪರಿಗಣನೆಗೆ ತೆಗೆದುಕೊಳ್ಳದೆ) ಶೇ 10.1ರಿಂದ ಶೇ 8ಕ್ಕೆ ಪರಿಷ್ಕರಿಸಿತ್ತು. ಇದು ವಿತ್ತೀಯ ಕೊರತೆಯ ಗುರಿಯನ್ನು ಸಾಧಿಸುವ ಸರ್ಕಾರದ ಸಾಮರ್ಥ್ಯದ ಬಗ್ಗೆ ಕಳವಳ ಹುಟ್ಟುಹಾಕಿತ್ತು.
2024–25ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಶೇ 4.8ರಷ್ಟು ವಿತ್ತೀಯ ಕೊರತೆಯ ಗುರಿಯನ್ನು ಸಾಧಿಸಿತ್ತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ವೇಳೆ, 2025–26ರ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.4ಕ್ಕೆ (ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ₹15.69 ಲಕ್ಷ ಕೋಟಿ) ತಗ್ಗಿಸಲು ಸರ್ಕಾರ ಬಜೆಟ್‌ನಲ್ಲಿ ಗುರಿ ನಿಗದಿ ಮಾಡಲಾಗಿದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.