ADVERTISEMENT

ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಸವಾಲು

2020-21ರಲ್ಲಿ ವಿತ್ತೀಯ ಕೊರತೆ ಶೇ 3.5ರಷ್ಟನ್ನು ಮೀರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 17:32 IST
Last Updated 31 ಜನವರಿ 2021, 17:32 IST
ಅಂಕಿ–ಅಂಶ
ಅಂಕಿ–ಅಂಶ   

ಬೆಂಗಳೂರು: ದೇಶದ ವಿತ್ತೀಯ ಕೊರತೆಯು 2020–21ನೇ ಹಣಕಾಸು ವರ್ಷಕ್ಕೆ ಬಜೆಟ್‌ನಲ್ಲಿ ಅಂದಾಜು ಮಾಡಿದ್ದ ಶೇಕಡ 3.5ರಷ್ಟನ್ನು ಮೀರಲಿದೆ ಎಂದು ಕೇಂದ್ರ ಆರ್ಥಿಕ ಸಮೀಕ್ಷೆ ಹೇಳಿದೆ.

ವರಮಾನ ಸಂಗ್ರಹದಲ್ಲಿ ಇಳಿಕೆ ಆಗಿರುವುದರಿಂದ ವಿತ್ತೀಯ ಕೊರತೆ ಶೇ 7ಕ್ಕೆ ತಲುಪಲಿದೆ ಎಂದು ಬ್ರಿಕ್‌ವರ್ಕ್ಸ್‌ ರೇಟಿಂಗ್‌ ಸಂಸ್ಥೆ ಅಂದಾಜು ಮಾಡಿದೆ. ಕೇಂದ್ರ ಮತ್ತು ರಾಜ್ಯಗಳ ಒಟ್ಟಾರೆ ವಿತ್ತೀಯ ಕೊರತೆಯು ಶೇ 6ರ ಮಟ್ಟವನ್ನೂ ಮೀರಿ ಶೇ 14ಕ್ಕೆ ಏರಿಕೆಯಾಗಲಿದೆ ಎನ್ನುವುದು ಆರ್‌ಬಿಐನ ಮಾಜಿ ಗವರ್ನರ್‌ ಸಿ. ರಂಗರಾಜನ್‌ ಅವರ ಅಭಿಪ್ರಾಯ.

ಡಿಸೆಂಬರ್‌ ಅಂತ್ಯದ ವೇಳೆಗೆ ವಿತ್ತೀಯ ಕೊರತೆಯು ಬಜೆಟ್‌ ಅಂದಾಜನ್ನೂ ಮೀರಿ ₹ 11.58 ಲಕ್ಷ ಕೋಟಿಗೆ ತಲುಪಿದೆ. ಸರ್ಕಾರವು ಬಜೆಟ್‌ನಲ್ಲಿ ಅಂದಾಜು ಮಾಡಿದ್ದು ₹ 7.96 ಲಕ್ಷ ಕೋಟಿ ಮಾತ್ರ. ಸೋಮವಾರ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಸರ್ಕಾರವು ವಿತ್ತೀಯ ಕೊರತೆಯ ಮಾಹಿತಿಯೊಂದಿಗೆ ತನ್ನ ವರಮಾನ ಮತ್ತು ವೆಚ್ಚದ ಪರಿಷ್ಕೃತ ಅಂಕಿ–ಅಂಶವನ್ನು ಪ್ರಕಟಿಸಲಿದೆ.

ADVERTISEMENT

ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ 2021–22ನೇ ಹಣಕಾಸು ವರ್ಷದಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಳ್ಳುವುದು ಇನ್ನಷ್ಟು ಕಠಿಣವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ‘ಕೇಂದ್ರ ಬಜೆಟ್‌ನಲ್ಲಿ 2021–22ಕ್ಕೆ ವಿತ್ತೀಯ ಕೊರತೆಯನ್ನುಶೇ 5ರಷ್ಟು ನಿಗದಿ ಮಾಡುವ ನಿರೀಕ್ಷೆ ಇದೆ’ ಎಂದು ಐಸಿಆರ್‌ಎ ರೇಟಿಂಗ್ಸ್‌ನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ಬದಲಾವಣೆಗೆ ಅವಕಾಶ: ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ (ಎಫ್‌ಆರ್‌ಬಿಎಂ) ಕಾಯ್ದೆಯ ಸೆಕ್ಷನ್‌ 4(2)ರಲ್ಲಿ ವಿತ್ತೀಯ ಕೊರತೆ ಅಂದಾಜಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ. ಆರ್ಥಿಕ ಬೆಳವಣಿಗೆಯಲ್ಲಿ ಅನಿರೀಕ್ಷಿತ ಕುಸಿತ ಕಂಡುಬಂದ ಸಂದರ್ಭದಲ್ಲಿ ಅಂದಾಜಿನಲ್ಲಿ ಬದಲಾವಣೆ ಮಾಡಲು ಇದು ನೆರವಾಗುತ್ತದೆ.

2019–20ನೇ ಹಣಕಾಸು ವರ್ಷಕ್ಕೆ ಶೇ 3.5ರಷ್ಟು ವಿತ್ತೀಯ ಕೊರತೆ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ 2020–21ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎಫ್‌ಆರ್‌ಬಿಎಂ ಕಾಯ್ದೆಯ ಸೆಕ್ಷನ್‌ 4(2)ನ್ನು ಉಲ್ಲೇಖಿಸುವ ಮೂಲಕ ವಿತ್ತೀಯ ಕೊರತೆ ಗುರಿಯನ್ನು ಶೇ 0.5ರಷ್ಟು ಹೆಚ್ಚಿಸಿದ್ದರು. ಆ ಮೂಲಕ 2019–20ನೇ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಅಂದಾಜನ್ನು ಶೇ 3.8ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಅದನ್ನೂ ಮೀರಿ ಶೇ 4.6ಕ್ಕೆ ತಲುಪಿದೆ ಎಂದು ಸಿಎಜಿ 2020ರ ಮೇ ತಿಂಗಳಿನಲ್ಲಿ ವರದಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.