ADVERTISEMENT

Food Grain Production: 35 ಕೋಟಿ ಟನ್‌ ಆಹಾರ ಧಾನ್ಯ ಉತ್ಪಾದನೆ

ಪಿಟಿಐ
Published 21 ನವೆಂಬರ್ 2025, 23:47 IST
Last Updated 21 ನವೆಂಬರ್ 2025, 23:47 IST
   

ನವದೆಹಲಿ: ಜೂನ್‌ ಅಂತ್ಯಕ್ಕೆ ಕೊನೆಗೊಂಡ 2024–25ನೇ ಸಾಲಿನ ಬೆಳೆ ವರ್ಷದಲ್ಲಿ ದೇಶದಲ್ಲಿ 35.77 ಕೋಟಿ ಟನ್‌ನಷ್ಟು ಆಹಾರ ಧಾನ್ಯಗಳ ಉತ್ಪಾದನೆ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2023–24ನೇ ಸಾಲಿನ ಬೆಳೆ ವರ್ಷ ದಲ್ಲಿ  (ಜುಲೈನಿಂದ ಜೂನ್‌) 33.22 ಕೋಟಿ ಟನ್‌ನಷ್ಟು ಧಾನ್ಯ ಉತ್ಪಾದನೆ ಆಗಿತ್ತು. ಇದಕ್ಕೆ ಹೋಲಿಸಿದರೆ ಉತ್ಪಾದನೆ ಯಲ್ಲಿ ಶೇ 8ರಷ್ಟು ಏರಿಕೆ ಆಗಿದೆ ಎಂದು ತಿಳಿಸಿದೆ.

‘ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಸರ್ಕಾರದಿಂದಲೇ ಖರೀದಿ ಸೇರಿದಂತೆ ರೈತರ ಪರಿಶ್ರಮ ಹಾಗೂ ಸರ್ಕಾರದ ಯೋಜನೆಗಳಿಂದ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗಿದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ADVERTISEMENT

2023–24ನೇ ಬೆಳೆ ವರ್ಷದಲ್ಲಿ 11.32 ಕೋಟಿ ಟನ್‌ನಷ್ಟು ಗೋಧಿ ಉತ್ಪಾದನೆ ಆಗಿತ್ತು. ಈ ಬಾರಿ 11.79 ಕೋಟಿ ಟನ್‌ನಷ್ಟು ಉತ್ಪಾದನೆ ಆಗಿದ್ದು, ಉತ್ಪಾದನೆಯಲ್ಲಿ ಏರಿಕೆ ಕಂಡಿದೆ.

ಭತ್ತ ಉತ್ಪಾದನೆಯು 15 ಕೋಟಿ ಟನ್‌ನಷ್ಟಾಗಿದೆ. ಏಕದಳ ಧಾನ್ಯಗಳ ಉತ್ಪಾದನೆ 6.39 ಕೋಟಿ ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆ 2.56 ಕೋಟಿ ಟನ್‌ಗೆ ಹೆಚ್ಚಳವಾಗಿದೆ. 2023–24ರ ಬೆಳೆ ವರ್ಷದಲ್ಲಿ ಇದು ಕ್ರಮವಾಗಿ, 13.78 ಕೋಟಿ ಟನ್, 5.69 ಕೋಟಿ ಟನ್‌ ಮತ್ತು 2.42 ಕೋಟಿ ಟನ್‌ನಷ್ಟಾಗಿತ್ತು ಎಂದು ತಿಳಿಸಿದೆ.

ಎಣ್ಣೆ ಕಾಳುಗಳ ಉತ್ಪಾದನೆ 3.96 ಕೋಟಿ ಟನ್‌ನಿಂದ 4.29 ಕೋಟಿ ಟನ್‌ಗೆ ಹೆಚ್ಚಳವಾಗಿದೆ. ವಾಣಿಜ್ಯ ಬೆಳೆಗಳಲ್ಲಿ ಕಬ್ಬು 45.46 ಕೋಟಿ ಟನ್‌ನಷ್ಟು ಉತ್ಪಾದನೆ ಆಗಿದೆ. 

ಆದರೆ, ಹತ್ತಿ ಉತ್ಪಾದನೆ 3.25 ಕೋಟಿ ಬೇಲ್‌ನಿಂದ 2.97 ಕೋಟಿ ಬೇಲ್‌ಗೆ (1 ಬೇಲ್‌ ಎಂದರೆ 170 ಕೆ.ಜಿ) ಇಳಿದಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.