ADVERTISEMENT

16 ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ?

ಆಹಾರ ವಸ್ತುಗಳ ದರ ಏರಿಕೆ ಪರಿಣಾಮ

ರಾಯಿಟರ್ಸ್
Published 11 ಏಪ್ರಿಲ್ 2022, 16:08 IST
Last Updated 11 ಏಪ್ರಿಲ್ 2022, 16:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಹಾರ ವಸ್ತುಗಳ ದರವು ನಿರಂತರವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ಭಾರತದ ಚಿಲ್ಲರೆ ಹಣದುಬ್ಬರ ಪ್ರಮಾಣವು ಮಾರ್ಚ್‌ನಲ್ಲಿ ಶೇ 6.35ಕ್ಕೆ ಏರಿಕೆ ಆಗಿರುವ ಸಾಧ್ಯತೆ ಇದೆ. ಇದು 16 ತಿಂಗಳ ಗರಿಷ್ಠ ಮಟ್ಟವಾಗಿರಲಿದೆ.

ರಾಯಿಟರ್ಸ್‌ ಸುದ್ದಿಸಂಸ್ಥೆಯು ಏಪ್ರಿಲ್‌ 4ರಿಂದ 8ರವರೆಗೆ 48 ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಸಂಗ್ರಹಿಸಿ ಈ ವರದಿ ನೀಡಿದೆ.

ಆರ್‌ಬಿಐ, ಚಿಲ್ಲರೆ ಹಣದುಬ್ಬರದ ಗರಿಷ್ಠ ಮಿತಿಯನ್ನು ಶೇ 6ಕ್ಕೆ ನಿಗದಿಪಡಿಸಿದೆ. ಆದರೆ, ಆಹಾರ ವಸ್ತುಗಳ ದರ ಏರಿಕೆಯಿಂದಾಗಿ ಜನವರಿ, ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರವು ಈ ಮಟ್ಟವನ್ನು ಮೀರಿದೆ.

ADVERTISEMENT

ಫೆಬ್ರುವರಿ ಅಂತ್ಯದ ವೇಳೆಗೆ ರಷ್ಯಾ–ಉಕ್ರೇನ್‌ ಸಂಘರ್ಷ ಆರಂಭ ಆಯಿತು. ಅದರಿಂದಾಗಿ ಕಚ್ಚಾ ತೈಲ ದರ ಏರಿಕೆ ಆಯಿತು. ಆದರೆ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯನ್ನು ತಡೆ ಹಿಡಿದಿದ್ದವು. ಮಾರ್ಚ್‌ 22ರಿಂದ ಇಂಧನ ದರ ಏರಿಕೆ ಆರಂಭ ಆಯಿತು. ಹೀಗಾಗಿ ಗ್ರಾಹಕ ಬಳಕೆ ವಸ್ತುಗಳ ದರ ಏರಿಕೆಯು ಏಪ್ರಿಲ್‌ ತಿಂಗಳವರೆಗೂ ಕಂಡುಬಂದಿರಲಿಲ್ಲ.

ಚಿಲ್ಲರೆ ಹಣದುಬ್ಬರದ ಅಧಿಕೃತ ಅಂಕಿ–ಅಂಶಗಳು ಮಂಗಳವಾರ ಬಹಿರಂಗವಾಗಲಿವೆ. ಶೇ 6.06ರಿಂದ ಶೇ 6.50ರ ಮಟ್ಟದಲ್ಲಿ ಅದು ಇರುವ ಅಂದಾಜು ಮಾಡಲಾಗಿದೆ. ಶೇ 6ಕ್ಕಿಂತಲೂ ಕೆಳಕ್ಕೆ ಇಳಿಯುವ ನಿರೀಕ್ಷೆ ಇಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆ, ರಸಗೊಬ್ಬರ ಮತ್ತು ಧಾನ್ಯಗಳ ಪೂರೈಕೆಗೆ ಅಡ್ಡಿ ಉಂಟಾಗಿದೆ. ಇದರಿಂದಾಗಿ ಆಹಾರ ವಸ್ತುಗಳ ಬೆಲೆಯು ಏರುಮುಖವಾಗಿಯೇ ಇರುವ ನಿರೀಕ್ಷೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.