ADVERTISEMENT

ನಿಫ್ಟಿಯಲ್ಲಿ ನೊಂದಾಯಿತ ಕಂಪನಿಗಳಲ್ಲಿ ಎಫ್‌ಪಿಐ ಪಾಲು ಹೆಚ್ಚಳ

ಪಿಟಿಐ
Published 8 ಫೆಬ್ರುವರಿ 2021, 14:45 IST
Last Updated 8 ಫೆಬ್ರುವರಿ 2021, 14:45 IST

ನವದೆಹಲಿ: ರಾಷ್ಟ್ರೀಯ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಪಾಲು 2020ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 22.74ಕ್ಕೆ ಏರಿಕೆಯಾಗಿದೆ. ಇದು ಐದು ವರ್ಷಗಳ ಗರಿಷ್ಠ ಮಟ್ಟವಾಗಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ₹ 1.42 ಲಕ್ಷ ಕೋಟಿ ಹೂಡಿಕೆ ಮಾಡಿರುವುದೇ ಇದಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಎಫ್‌ಪಿಐ ಪಾಲು ಶೇ 21.51ರಷ್ಟಿತ್ತು ಎಂದು ಪ್ರೈಮ್‌ಇನ್ಫೊಬೇಸ್‌.ಕಾಂ ಮಾಹಿತಿ ನೀಡಿದೆ.

ADVERTISEMENT

ಮೌಲ್ಯದ ಲೆಕ್ಕದಲ್ಲಿ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಎಫ್‌ಪಿಐ ಪಾಲು ₹ 32.47 ಲಕ್ಷ ಕೋಟಿ ಇತ್ತು. ಇದು ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 29ರಷ್ಟು ಹೆಚ್ಚಾಗಿ ₹ 41.83 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು, ಭಾರತದ ಮಾರುಕಟ್ಟೆಯಲ್ಲಿ ಪ್ರವರ್ತಕರಲ್ಲದ ಅತಿದೊಡ್ಡ ಷೇರುದಾರರಾಗಿದ್ದಾರೆ. ಅವರ ಹೂಡಿಕೆಯ ನಿರ್ಧಾರವು ಷೇರುಗಳ ಬೆಲೆ ಮತ್ತು ಒಟ್ಟಾರೆಯಾಗಿ ಷೇರುಪೇಟೆಯ ದಿಕ್ಕಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪ್ರೈಮ್‌ ಡೇಟಾಬೇಸ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಪ್ರಣವ್‌ ಹಲ್ದಿಯಾ ಹೇಳಿದ್ದಾರೆ.

ದೇಶಿ ಸಾಂಸ್ಥಿಕ ಹೂಡಿಕೆದಾರರ ಪಾಲು ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 13.94 ರಿಂದ ಶೇ 13.55ಕ್ಕೆ ಇಳಿಕೆಯಾಗಿದೆ.

ದೇಶದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ ಆಗಿರುವ ಎಲ್‌ಐಸಿಯ ಹೂಡಿಕೆಯ ಪಾಲು 290 ಕಂಪನಗಳಲ್ಲಿ ಶೇ 3.91 ರಿಂದ ಶೇ 3.70ಕ್ಕೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. 2012ರ ಜೂನ್‌ 30ರಲ್ಲಿ ಶೇ 5ರಷ್ಟು ಗರಿಷ್ಠ ಪಾಲು ಹೊಂದಿತ್ತು.

ಸರ್ಕಾರದ ಪಾಲು ಶೇ 5.10 ರಿಂದ ಶೇ 5.08ಕ್ಕೆ ಇಳಿಕೆಯಾಗಿದೆ.

ಕಂಪನಿಗಳಲ್ಲಿ ರಿಟೇಲ್‌ ಹೂಡಿಕೆದಾರರ ಪಾಲು (₹ 2 ಲಕ್ಷದವರೆಗೆ ಷೇರುಹೊಂದಿರುವವರು) ಶೇ 7.01 ರಿಂದ ಶೇ 6.90ಕ್ಕೆ ಇಳಿಕೆ ಕಂಡಿದೆ. ಷೇರುಪೇಟೆಯು ಏರುಮುಖವಾಗಿದ್ದರಿಂದ ಲಾಭ ಪಡೆದುಕೊಳ್ಳಲು ತಮ್ಮ ಪಾಲನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಹಲ್ದಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.