ADVERTISEMENT

ಎಫ್‌ಪಿಐ: ಫೆಬ್ರುವರಿಯಲ್ಲಿ ₹ 35,506 ಕೋಟಿ ಹೊರಹರಿವು

ಪಿಟಿಐ
Published 27 ಫೆಬ್ರುವರಿ 2022, 12:57 IST
Last Updated 27 ಫೆಬ್ರುವರಿ 2022, 12:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಸತತ ಐದನೇ ತಿಂಗಳಿನಲ್ಲಿಯೂ ದೇಶದ ಮಾರುಕಟ್ಟೆಗಳಿಂದ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಫೆಬ್ರುವರಿ 1 ರಿಂದ 25ರವರೆಗಿನ ವಹಿವಾಟು ಅವಧಿಯಲ್ಲಿ ₹ 35,506 ಕೋಟಿ ಮೊತ್ತವನ್ನು ಬಂಡವಾಳ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದಿದ್ದಾರೆ. ಇದರಲ್ಲಿ ₹ 31,158 ಕೋಟಿ ಮೊತ್ತದ ಷೇರುಗಳು ಹಾಗೂ ₹ 4,467 ಕೋಟಿ ಮೊತ್ತದ ಸಾಲಪತ್ರಗಳು ಸೇರಿಕೊಂಡಿವೆ.

2021ರ ಅಕ್ಟೋಬರ್‌ನಿಂದಲೂ ಬಂಡವಾಳ ಹೊರಹರಿವು ಕಂಡುಬರುತ್ತಿದೆ. 2020ರ ಮಾರ್ಚ್‌ ನಂತರದ 2022ರ ಫೆಬ್ರುವರಿಯಲ್ಲಿ ಆಗಿರುವ ಗರಿಷ್ಠ ಮಟ್ಟದ ಹೊರಹರಿವು ಇದಾಗಿದೆ. 2020ರ ಮಾರ್ಚ್‌ನಲ್ಲಿ ₹ 1.18 ಲಕ್ಷ ಕೋಟಿ ಬಂಡವಾಳ ಹೊರಹರಿವು ಕಂಡಿತ್ತು. ಈ ಅವಧಿಯಲ್ಲಿ ಹೈಬ್ರಿಡ್‌ ಫಂಡ್‌ನಲ್ಲಿ ₹ 120 ಕೋಟಿ ಹೂಡಿಕೆ ಮಾಡಿದ್ದಾರೆ.

ADVERTISEMENT

ಶೀಘ್ರವೇ ಬಡ್ಡಿದರ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳುವುದಾಗಿ ಅಮೆರಿಕದ ಫೆಡರಲ್‌ ರಿಸರ್ವ್‌ ಹೇಳಿರುವುದು ಬಂಡವಾಳ ಹೊರಹರಿವಿಗೆ ಮುಖ್ಯ ಕಾರಣ ಆಗಿದೆ. ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ನಡೆಯುತ್ತಿರುವ ಸಂಘರ್ಷ ಸಹ ವಿದೇಶಿ ಹೂಡಿಕೆದಾರರನ್ನು ಎಚ್ಚರಿಕೆಯಿಂದ ವಹಿವಾಟು ನಡೆಸುವಂತೆ ಮಾಡಿದೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾ ಸಂಸ್ಥೆಯ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತ ಹೇಳಿದ್ದಾರೆ.

ರಷ್ಯಾ– ಉಕ್ರೇನ್ ಬಿಕ್ಕಟ್ಟು ಯಾವ ಸ್ವರೂಪ ಪಡೆಯಲಿದೆ ಎಂದು ನಿರೀಕ್ಷಿಸುವುದು ಕಷ್ಟ. ಸಂಘರ್ಷವು ಸ್ವಲ್ಪ ಸಮಯದವರೆಗೆ ಮುಂದುವರಿದರೆ, ಜಾಗತಿಕ ಆರ್ಥಿಕತೆಯ ಮೇಲಿನ ಪರಿಣಾಮಗಳು ತೀವ್ರಗೊಳ್ಳಲಿವೆ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.