ADVERTISEMENT

ಎಫ್‌ಪಿಐ: ₹ 9,015 ಕೋಟಿ ಹೊರಹರಿವು

ಪಿಟಿಐ
Published 19 ಜುಲೈ 2020, 10:58 IST
Last Updated 19 ಜುಲೈ 2020, 10:58 IST
ಎಫ್‌ಪಿಐ
ಎಫ್‌ಪಿಐ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜುಲೈನಲ್ಲಿ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ಜುಲೈ 1 ರಿಂದ 17ರವರೆಗಿನ ವಹಿವಾಟಿನಲ್ಲಿ ₹ 6,058 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ ₹ 2,957 ಕೋಟಿ ಮೌಲ್ಯದ ಸಾಲಪತ್ರಗಳನ್ನು ಅವರು ಮಾರಾಟ ಮಾಡಿದ್ದಾರೆ. ಇದಕ್ಕೂ ಮುನ್ನ ಜೂನ್‌ನಲ್ಲಿ ₹ 24,053 ಕೋಟಿ ಹೂಡಿಕೆ ಮಾಡಿದ್ದರು.

‘ಷೇರುಪೇಟೆಯಲ್ಲಿ ಸೂಚ್ಯಂಕಗಳ ಏರಿಕೆಯು ಹೂಡಿಕೆದಾರರಿಗೆ ಲಾಭ ಗಳಿಕೆಯ ಅವಕಾಶ ನೀಡಿದೆ. ಇದರ ಜತೆಗೆ ಹಲವು ರಾಜ್ಯಗಳು ಕೊರೊನಾ ಹರಡುವಿಕೆ ನಿಯಂತ್ರಿಸಲು ಮತ್ತೆ ಲಾಕ್‌ಡೌನ್‌ ಹೇರುತ್ತಿವೆ. ಇದರಿಂದ ದೇಶಿ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಹಿನ್ನಡೆಯಾಗುವ ಸಾಧ್ಯತೆ ವ್ಯಕ್ತವಾಗಿದೆ. ಇದೂ ಸಹ ಬಂಡವಾಳ ಹಿಂದಕ್ಕೆ ಪಡೆಯಲು ಕಾರಣವಾಗಿದೆ’ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

‘ದಕ್ಷಿಣ ಕೊರಿಯಾವನ್ನು ಹೊರತುಪಡಿಸಿ, ಪ್ರವರ್ಧಮಾನಕ್ಕೆ ಬರುತ್ತಿರುವ ಬಹುತೇಕ ಮಾರುಕಟ್ಟೆಗಳಿಂದ ಎಫ್‌ಪಿಐ ಹೊರಹರಿವು ಕಂಡುಬಂದಿದೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ರುಸ್ಮಿಕ್‌ ಓಜಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.