ADVERTISEMENT

ಸೆಬಿ ಆದೇಶ ಪ್ರಶ್ನಿಸಲಿರುವ ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌

ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ಆಸ್ತಿ ನಿರ್ವಹಣಾ ಕಂಪನಿ ವಿವಾದ

ಪಿಟಿಐ
Published 8 ಜೂನ್ 2021, 11:22 IST
Last Updated 8 ಜೂನ್ 2021, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಾಲಪತ್ರ ಆಧಾರಿತ ಆರು ಮ್ಯೂಚುವಲ್‌ ಫಂಡ್‌ ಯೋಜನೆಗಳನ್ನು 2020ರಲ್ಲಿ ಸ್ಥಗಿತಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತನ್ನ ವಿರುದ್ಧ ನೀಡಿರುವ ಆದೇಶವನ್ನು ಪ್ರಶ್ನಿಸಿ ಎಸ್‌ಎಟಿ ಕದ ತಟ್ಟುವುದಾಗಿ ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ಆಸ್ತಿ ನಿರ್ವಹಣಾ ಕಂಪನಿ ಹೇಳಿದೆ.

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಆಸ್ತಿ ನಿರ್ವಹಣಾ ಕಂಪನಿಯು ಸಾಲಪತ್ರ ಆಧಾರಿತ ಹೊಸ ಯೋಜನೆಗಳನ್ನು ಎರಡು ವರ್ಷಗಳವರೆಗೆ ಆರಂಭಿಸುವಂತಿಲ್ಲ, ಆರು ಮ್ಯೂಚುವಲ್‌ ಫಂಡ್‌ ಯೋಜನೆಗಳನ್ನು ಸ್ಥಗಿತಗೊಳಿಸಿದ ಪ್ರಕರಣದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ₹ 5 ಕೋಟಿ ದಂಡ ಪಾವತಿಸಬೇಕು ಎಂದು ಸೆಬಿ ಸೋಮವಾರ ಆದೇಶಿಸಿದೆ.

ಸ್ಥಗಿತಗೊಳಿಸಿರುವ ಆರು ಫಂಡ್‌ಗಳಿಗಾಗಿ ಸಂಗ್ರಹಿಸಿದ ಹೂಡಿಕೆ ನಿರ್ವಹಣೆ ಹಾಗೂ ಸಲಹಾ ಶುಲ್ಕವನ್ನು ಹೂಡಿಕೆದಾರರಿಗೆ ಬಡ್ಡಿ ಸಹಿತ ಹಿಂದಿರುಗಿಸಬೇಕು ಎಂದು ಕೂಡ ಸೆಬಿ ತಾಕೀತು ಮಾಡಿದೆ. ಹೀಗೆ ಹಿಂದಿರುಗಿಸಬೇಕಿರುವ ಶುಲ್ಕ ಮತ್ತು ಬಡ್ಡಿಯ ಮೊತ್ತ ₹ 512 ಕೋಟಿಗಿಂತ ಹೆಚ್ಚು.

ADVERTISEMENT

‘ಸೆಬಿ ಆದೇಶದಲ್ಲಿ ಹೇಳಿರುವ ಮಾತುಗಳನ್ನು ನಾವು ಒಪ್ಪುವುದಿಲ್ಲ. ಆದೇಶ ಪ್ರಶ್ನಿಸಿ ಮೇಲ್ಮನವಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ಕಂಪನಿಯು ವಕ್ತಾರರೊಬ್ಬರು ತಿಳಿಸಿದರು.

ಸ್ಥಗಿತಗೊಂಡ ಆರು ಮ್ಯೂಚುವಲ್‌ ಫಂಡ್‌ಗಳಲ್ಲಿ ಒಟ್ಟು ₹ 25 ಸಾವಿರ ಕೋಟಿ ಹಣ ಇತ್ತು. ಈ ವರ್ಷದ ಏಪ್ರಿಲ್‌ 30ರವರೆಗೆ ಹೂಡಿಕೆದಾರರಿಗೆ ಒಟ್ಟು ₹ 14,572 ಕೋಟಿ ಹಿಂದಿರುಗಿಸಲಾಗಿದೆ. ಜೂನ್‌ 4ರ ವೇಳೆಗೆ ಹಿಂದಿರುಗಿಸಲು ಒಟ್ಟು ₹ 3,205 ಕೋಟಿ ಲಭ್ಯವಿತ್ತು. ಈ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಿದ ನಂತರದಲ್ಲಿ, ಒಟ್ಟು ₹ 17,778 ಕೋಟಿಯನ್ನು ಮರಳಿಸಿದಂತೆ ಆಗುತ್ತದೆ. 2020ರ ಏಪ್ರಿಲ್‌ 30ಕ್ಕೆ ಇದ್ದ ಹಣದ ಮೊತ್ತಕ್ಕೆ ಹೋಲಿಸಿದರೆ, ಶೇಕಡ 71ರಷ್ಟು ಹಣವನ್ನು ಹೂಡಿಕೆದಾರರಿಗೆ ವಾಪಸ್ ಕೊಟ್ಟಂತೆ ಆಗುತ್ತದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.