ADVERTISEMENT

ಉಚಿತ ಕೊಡುಗೆ ಪರಿಣಾಮದ ಕುರಿತು ಮಾಹಿತಿ ಬೇಕು: ಆಶಿಮಾ ಗೋಯಲ್

ಪಿಟಿಐ
Published 21 ಆಗಸ್ಟ್ 2022, 15:50 IST
Last Updated 21 ಆಗಸ್ಟ್ 2022, 15:50 IST

ನವದೆಹಲಿ: ‘ಉಚಿತ ಕೊಡುಗೆಗಳು ವಾಸ್ತವದಲ್ಲಿ ಉಚಿತವಲ್ಲ. ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಘೋಷಣೆ ಮಾಡುವಾಗ, ಅವು ಅದಕ್ಕೆ ಬೇಕಿರುವ ಹಣವನ್ನು ಎಲ್ಲಿಂದ ತರಲಾಗುತ್ತದೆ, ಯಾವ ಬಗೆಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಲಾಗುತ್ತದೆ ಎಂಬುದನ್ನೂ ಮತದಾರರಿಗೆ ಸ್ಪಷ್ಟಪಡಿಸುವಂತೆ ಆಗಬೇಕು’ ಎಂದು ಆರ್‌ಬಿಐನ ಹಣಕಾಸು ನೀತಿ ಸಮಿತಿ ಸದಸ್ಯೆ ಆಶಿಮಾ ಗೋಯಲ್ ಹೇಳಿದ್ದಾರೆ.

ಸರ್ಕಾರವು ಉಚಿತ ಕೊಡುಗೆಗಳನ್ನು ನೀಡಿದಾಗ ಬೇರೆ ಒಂದು ಕಡೆಯಲ್ಲಿ ಅದಕ್ಕಾಗಿ ವೆಚ್ಚ ಮಾಡಬೇಕಾಗುತ್ತದೆ. ಸಾಮರ್ಥ್ಯ ವರ್ಧಿಸುವ ಸೇವೆಗಳು, ಸರಕುಗಳಿಗೆ ಮಾಡುವ ಇಂತಹ ವೆಚ್ಚಗಳು ಒಳ್ಳೆಯವು. ಆದರೆ, ಬೆಲೆಯಲ್ಲಿ ವ್ಯತ್ಯಾಸ ತರುವ ಉಚಿತ ಕೊಡುಗೆಗಳು ಕೆಟ್ಟದ್ದು ಎಂದು ಗೋಯಲ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಉಚಿತ ಕೊಡುಗೆಗಳು ಉತ್ಪಾದನೆಯ ಮೇಲೆ, ಸಂಪನ್ಮೂಲಗಳ ಹಂಚಿಕೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತವೆ. ಪರೋಕ್ಷವಾಗಿ ಭಾರಿ ವೆಚ್ಚಗಳನ್ನು ಹೇರುತ್ತವೆ. ಉಚಿತ ವಿದ್ಯುತ್ ನೀಡಲು ಆರಂಭಿಸಿದ ನಂತರ ಪಂಜಾಬ್‌ನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಉಚಿತ ಕೊಡುಗೆಗಳಿಗೆ ಅಗತ್ಯವಿರುವ ಹಣಕಾಸಿನ ಲೆಕ್ಕಾಚಾರವನ್ನು ಬಹಿರಂಗಪಡಿಸಬೇಕು ಎಂಬ ನಿಯಮ ಜಾರಿಗೆ ಬಂದರೆ, ಪಕ್ಷಗಳು ಪೈಪೋಟಿಗೆ ಬಿದ್ದು ಜನಪ್ರಿಯ ಹಾಗೂ ಉಚಿತ ಕೊಡುಗೆಯ ಯೋಜನೆಗಳನ್ನು ಘೋಷಿಸುವುದು ಕೂಡ ಕಡಿಮೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಚಿತ ಕೊಡುಗೆಗಳನ್ನು ಘೋಷಿಸುವುದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಉಚಿತ ಕೊಡುಗೆಗಳನ್ನು ನೀಡುವುದರ ಬಗ್ಗೆ ಪರಿಶೀಲಿಸಲು ವಿಶೇಷ ಸಮಿತಿಯನ್ನು ರಚಿಸುವ ಸಲಹೆಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.