ADVERTISEMENT

ಬಾಂಡ್‌ ವಿತರಣೆ: ಬಂಡವಾಳ ಸಂಗ್ರಹ ಶೇ 14ರಷ್ಟು ಹೆಚ್ಚಳ

ಪಿಟಿಐ
Published 21 ಏಪ್ರಿಲ್ 2021, 16:42 IST
Last Updated 21 ಏಪ್ರಿಲ್ 2021, 16:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಷೇರುಪೇಟೆಗಳಲ್ಲಿ ನೋಂದಾಯಿತ ಕಂಪನಿಗಳು ಬಾಂಡ್‌ಗಳ ಖಾಸಗಿ ವಿತರಣೆಯ ಮೂಲಕ 2020–21ರಲ್ಲಿ ₹ 7.72 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ.

2019–20ನೇ ಹಣಕಾಸು ವರ್ಷದಲ್ಲಿ ಸಂಗ್ರಹಿಸಿದ್ದ ₹ 6.75 ಲಕ್ಷ ಕೋಟಿಗೆ ಹೋಲಿಸಿದರೆ ಬಂಡವಾಳ ಸಂಗ್ರಹದಲ್ಲಿ ಶೇಕಡ 14ರಷ್ಟು ಏರಿಕೆ ಆಗಿದೆ ಎನ್ನುವ ಮಾಹಿತಿಯು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿದೆ (ಸೆಬಿ).

ಕಡಿಮೆ ಬಡ್ಡಿದರ ಮತ್ತು ವ್ಯವಸ್ಥೆಯಲ್ಲಿ ಹೆಚ್ಚುವರಿ ನಗದು ಲಭ್ಯತೆಯ ಕಾರಣಗಳಿಂದಾಗಿ ಈ ಪ್ರಮಾಣದಲ್ಲಿ ಬಂಡವಾಳ ಸಂಗ್ರಹವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ADVERTISEMENT

ಹಣಕಾಸು ವರ್ಷವೊಂದರಲ್ಲಿ ಸಂಗ್ರಹವಾಗಿರುವ ಅತಿ ಹೆಚ್ಚಿನ ಬಂಡವಾಳ ಮೊತ್ತ ಇದಾಗಿದೆ. ಹಣಕಾಸಿನ ಸ್ಥಿತಿ ಉತ್ತಮಪಡಿಸಿಕೊಳ್ಳಲು, ಸಾಲ ತೀರಿಸಲು ಹಾಗೂ ದುಡಿಯುವ ಬಂಡವಾಳದ ಅಗತ್ಯಗಳಿಗಾಗಿ ಕಂಪನಿಗಳು ಬಂಡವಾಳ ಸಂಗ್ರಹಿಸಿವೆ.

‘ಬಾಂಡ್‌ ವಿತರಣೆಯ ಬಡ್ಡಿ ವೆಚ್ಚವು ತುಲನಾತ್ಮಕವಾಗಿ ಕಡಿಮೆ ಇರುವುದು ಕಂಪನಿಗಳು ಈ ಮಾರ್ಗ ಅನುಸರಿಸಲು ಒಂದು ಕಾರಣ. ಅಲ್ಲದೆ, ಕಾರ್ಪೊರೇಟ್‌ಗಳ ವಸೂಲಾಗದ ಸಾಲವು (ಎನ್‌ಪಿಎ) ಹೆಚ್ಚುತ್ತಲೇ ಇರುವುದರಿಂದ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ದೊಡ್ಡ ಮೊತ್ತದ ಸಾಲ ಕೊಡಲು ಹಿಂಜರಿಯುತ್ತಿವೆ’ ಎಂದು ಗ್ರೋವ್ ಸಂಸ್ಥೆಯ ಸಹ ಸ್ಥಾಪಕ ಹರ್ಷ್ ಜೈನ್‌ ಹೇಳಿದ್ದಾರೆ.

‘ಉದ್ಯಮಿಗಳು ಮತ್ತು ಹೂಡಿಕೆದಾರರ ಅಗತ್ಯಗಳನ್ನು ಪೂರೈಸಲು ಕಂಪನಿಗಳು ಖಾಸಗಿ ವಿತರಣೆಯ ಮೂಲಕ ಬಂಡವಾಳ ಸಂಗ್ರಹಿಸಿವೆ. ವೆಚ್ಚ ಮತ್ತು ಸಮಯದ ದೃಷ್ಟಿಯಿಂದಬಂಡವಾಳ ಸಂಗ್ರಹಿಸಲು ಇದು ಪರಿಣಾಮಕಾರಿ ಮಾರ್ಗ’ ಎಂದು ಇನ್‌ವೆಸ್ಟ್‌19 ಟೆಕ್ನಾಲಜೀಸ್‌ನ ಸ್ಥಾಪಕ ಕೌಶಲೇಂದ್ರ ಸಿಂಗ್‌ ಸೆಂಗರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.