ಬರ್ಲಿನ್: ಜರ್ಮನಿಯ ಬವೇರಿಯನ್ ಆಲ್ಪ್ಸ್‌ನಲ್ಲಿ ನಡೆದ ಜಿ–7 ಸದಸ್ಯ ದೇಶಗಳ ಸಭೆಯಲ್ಲಿ ರಷ್ಯಾದಿಂದ ಚಿನ್ನದ ಆಮದುಗಳನ್ನು ನಿಷೇಧಿಸಲು ವಿಶ್ವದ ಬಲಿಷ್ಠ ರಾಷ್ಟ್ರಗಳು ಭಾನುವಾರ ಒಪ್ಪಿಕೊಂಡಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ರಷ್ಯಾ ಮೇಲಿನ ನಿರ್ಬಂಧಗಳನ್ನು ಬಿಗಿಗೊಳಿಸುವ ಪ್ರಯತ್ನಗಳ ಭಾಗವಾಗಿ ಬ್ರಿಟನ್, ಅಮೆರಿಕ, ಕೆನಡಾ ಮತ್ತು ಜಪಾನ್ ದೇಶಗಳು ರಷ್ಯಾದ ಚಿನ್ನದ ಆಮದುಗಳನ್ನು ನಿಷೇಧಿಸಲಿವೆ.
ಈ ನಿಷೇಧವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಆಮದು ಮಾಡಿಕೊಳ್ಳುವ ದೇಶ ಭಾರತದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಇದು ಭಾರತದಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪರ್ಯಾಯವಾಗಿ, ರಷ್ಯಾದಿಂದ ಭಾರತಕ್ಕೆ ಕಳ್ಳಸಾಗಣೆದಾರರ ಮೂಲಕ ಚಿನ್ನದ ಸರಬರಾಜಿಗೆ ದಾರಿಯಾಗವಬಹುದು’ಎಂದು ಹೆಸರು ಹೇಳಲು ಇಚ್ಛಿಸದ ತಜ್ಞರು ಹೇಳಿದ್ದಾರೆ.
‘ರಷ್ಯಾದ ವಾರ್ಷಿಕ ಚಿನ್ನದ ಉತ್ಪಾದನೆಯು 350 ರಿಂದ 380 ಟನ್‌ಗಳಷ್ಟಿದೆ. ಹೊಸದಾಗಿ ತೆಗೆದ ಚಿನ್ನವು ಬ್ರಿಟನ್ ಮತ್ತು ಸ್ವಿಟ್ಜರ್ಲೆಂಡ್‌ನಂತಹ ವ್ಯಾಪಾರ ಕೇಂದ್ರಗಳ ಮೂಲಕ ಪ್ರಪಂಚದ ಉಳಿದ ಭಾಗಗಳಿಗೆ ಲಭ್ಯವಿರುವುದಿಲ್ಲ. ಹೀಗಾಗಿ, ಪೂರೈಕೆಯ ಕೊರತೆಯನ್ನು ಸೃಷ್ಟಿಸುವುದರಿಂದ, ಟರ್ಕಿ ಮತ್ತು ಚೀನಾದಂತಹ ಮಾರುಕಟ್ಟೆಗಳಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ’ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.