ADVERTISEMENT

ಜಿಡಿಪಿ: 5 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ

​ಪ್ರಜಾವಾಣಿ ವಾರ್ತೆ
Published 31 ಮೇ 2019, 13:25 IST
Last Updated 31 ಮೇ 2019, 13:25 IST
   

ಮುಂಬೈ (ಪಿಟಿಐ): 2018–19ನೆ ಹಣಕಾಸು ವರ್ಷದಲ್ಲಿ ದೇಶಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 6.8ರಷ್ಟು ದಾಖಲಾಗಿದ್ದು, ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

2014–15ರಿಂದೀಚೆಗಿನ ಅತಿ ಕಡಿಮೆ ಮಟ್ಟದ ವೃದ್ಧಿ ದರ ಇದಾಗಿದೆ. 2013–14ರಲ್ಲಿ ಶೇ 6.4ರಷ್ಟು ದಾಖಲಾಗಿತ್ತು. ಹಿಂದಿನ ಹಣಕಾಸು ವರ್ಷದ ಜನವರಿ – ಮಾರ್ಚ್‌ ಅವಧಿಯ ನಾಲ್ಕನೆ ತ್ರೈಮಾಸಿಕದಲ್ಲಿನ ‘ಜಿಡಿಪಿ’ಯು ಶೇ 5.8ರಷ್ಟಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದು ಶೇ 8.1ರಷ್ಟಿತ್ತು. 17 ತ್ರೈಮಾಸಿಕಗಳಲ್ಲಿನ ಅತಿ ಕಡಿಮೆ ಮಟ್ಟ ಇದಾಗಿದೆ.

ವಾರ್ಷಿಕ ವೃದ್ಧಿ ದರವು ವರ್ಷದ ಹಿಂದೆ ಶೇ 7.2ರಷ್ಟು ದಾಖಲಾಗಿತ್ತು.ಶೇ 6.8ರ ವೃದ್ಧಿ ದರವು, ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುವ ಆರ್ಥಿಕತೆ ಎನ್ನುವ ಹೆಗ್ಗಳಿಕೆಗೆ ಎರವಾಗಿದೆ. ವೃದ್ಧಿ ದರವು ಮೊದಲ ಬಾರಿಗೆ ಚೀನಾಕ್ಕಿಂತ (ಶೇ 6.4) ಕಡಿಮೆ ಮಟ್ಟದಲ್ಲಿದೆ.

ADVERTISEMENT

ದೇಶದ ಪ್ರಮುಖ ವಲಯಗಳಾದ ಕೈಗಾರಿಕೆ, ಕೃಷಿ ಮತ್ತು ತಯಾರಿಕಾ ವಲಯದಲ್ಲಿನ ಉತ್ಪಾದನೆಯು ಕಳೆದ 9 ತಿಂಗಳಲ್ಲಿ ಕುಸಿದಿರುವ ಕಾರಣಕ್ಕೆ ವೃದ್ಧಿ ದರ ಕಡಿಮೆಯಾಗಿದೆ.

ಒಟ್ಟಾರೆ ಹಣಕಾಸು ವರ್ಷದಲ್ಲಿನ ಜಿಡಿಪಿ ದರವು ಶೇ 7.1 ರಷ್ಟು ಮತ್ತು 4ನೆ ತ್ರೈಮಾಸಿಕದಲ್ಲಿನ ವೃದ್ಧಿ ದರ ಶೇ 6.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು. ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಈ ನಿರೀಕ್ಷೆಗಳನ್ನೆಲ್ಲ ಹುಸಿ ಮಾಡಿವೆ.

ಆರ್ಥಿಕತೆಯ ವೃದ್ಧಿ ದರ ಕಡಿಮೆಯಾಗಿರುವುದಕ್ಕೆ ಸರಕು ಮತ್ತು ಸೇವೆಗಳ ಬೇಡಿಕೆ ಕುಸಿದಿರುವುದು, ಬಂಡವಾಳ ಹೂಡಿಕೆಯು ಕಡಿಮೆಯಾಗಿರುವುದು ಮತ್ತು ರಫ್ತು ವಹಿವಾಟು ಕುಸಿದಿರುವುದು ಮುಖ್ಯ ಕಾರಣಗಳಾಗಿವೆ.

ವಿತ್ತೀಯ ಕೊರತೆ: ಹಿಂದಿನ ಹಣಕಾಸು ವರ್ಷದ ವಿತ್ತೀಯ ಕೊರತೆಯು ಶೇ 3.39ರಷ್ಟಾಗಿದೆ. ಇದು ಮಧ್ಯಂತರ ಬಜೆಟ್‌ನಲ್ಲಿನ ಅಂದಾಜಿಗೆ (ಶೇ 3.4) ಹತ್ತಿರದಲ್ಲಿ ಇದೆ.

ಹಣಕಾಸು ವರ್ಷದಲ್ಲಿನ ಒಟ್ಟಾರೆ ವೆಚ್ಚವು ಪರಿಷ್ಕೃತ ಗುರಿ ₹ 24.1 ಲಕ್ಷ ಕೋಟಿ ಬದಲಿಗೆ ₹ 23.1 ಲಕ್ಷ ಕೋಟಿಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.