ADVERTISEMENT

2020ರಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 1.9ರಷ್ಟು ಇರಲಿದೆ: ಐಎಂಎಫ್‌

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 0:55 IST
Last Updated 15 ಏಪ್ರಿಲ್ 2020, 0:55 IST
   

ವಾಷಿಂಗ್ಟನ್‌: 2020ರಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 1.9ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ತಿಳಿಸಿದೆ.

‘ಕೊರೊನಾ–2’ ವೈರಾಣು ವಿಶ್ವದಾದ್ಯಂತ ಉಂಟು ಮಾಡಿರುವ ಹಾವಳಿಯಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ವಿಶ್ವದ ಬಹುತೇಕ ದೇಶಗಳ ವೃದ್ಧಿ ದರ ಗಣನೀಯವಾಗಿ ಕುಗ್ಗಲಿದೆ. ಭಾರತದ ಶೇ 1.9ರಷ್ಟು ವೃದ್ಧಿ ದರವು ವಿಶ್ವದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯಾಗಿರುತ್ತದೆ ಎಂದು ಐಎಂಎಫ್‌ ತನ್ನ ವಿಶ್ವ ಆರ್ಥಿಕ ವರದಿಯಲ್ಲಿ ತಿಳಿಸಿದೆ.

ಜಾಗತಿಕ ವೃದ್ಧಿ ದರವು ಋಣಾತ್ಮಕ (– ಶೇ 3 ) ಮಟ್ಟದಲ್ಲಿ ಇರಲಿದೆ. ಅದಕ್ಕೆ ಹೋಲಿಸಿದರೆ ಚೀನಾ (ಶೇ 1.2) ಮತ್ತು ಭಾರತದ (ಶೇ 1.9) ಆರ್ಥಿಕ ವೃದ್ಧಿ ದರವು ಸಕಾರಾತ್ಮಕ ಬೆಳವಣಿಗೆ ಸಾಧಿಸಲಿವೆ ಎಂದು ಹೇಳಿದೆ.

ADVERTISEMENT

ಶೂನ್ಯ ಮಟ್ಟದ ವೃದ್ಧಿ

2020ರ ಕ್ಯಾಲೆಂಡರ್‌ ವರ್ಷದಲ್ಲಿ ಭಾರತದ ಜಿಡಿಪಿ ಶೂನ್ಯ ಮಟ್ಟದಲ್ಲಿ ಇರಲಿದೆ. 2020–21ನೇ ಹಣಕಾಸು ವರ್ಷದಲ್ಲಿ ಕೇವಲ ಶೇ 0.8ರಷ್ಟು ಪ್ರಗತಿ ದಾಖಲಾಗಲಿದೆ ಎಂದು ಬ್ರಿಟನ್ನಿನ ಷೇರು ದಲ್ಲಾಳಿ ಕಂಪನಿ ಬಾರ್ಕ್ಲೇಸ್‌ ತಿಳಿಸಿದೆ.

2020ರ ಕ್ಯಾಲೆಂಡರ್ ವರ್ಷದಲ್ಲಿ ‘ಜಿಡಿಪಿ’ಯು ಶೇ 2.5ರಷ್ಟು ಇರಲಿದೆ ಎಂದು ಬಾರ್ಕ್ಲೇಸ್‌ ಅಂದಾಜಿಸಿತ್ತು. ಈಗ ಅದನ್ನು ಶೂನ್ಯಕ್ಕೆ ಇಳಿಸಿದೆ. 2020–21ನೇ ಸಾಲಿನ ಪ್ರಗತಿಯನ್ನು ಈ ಮುಂಚಿನ ಶೇ 3.5 ರಿಂದ ಶೇ 0.8ಕ್ಕೆ ತಗ್ಗಿಸಿದೆ.

ಬಾರ್ಕ್ಲೇಸ್‌ ಅಂದಾಜು

0 %: 2020ರ ಕ್ಯಾಲೆಂಡರ್‌ ವರ್ಷದ ಜಿಡಿಪಿ

0.8 %: 2020–21ನೇ ಹಣಕಾಸು ವರ್ಷದ ಜಿಡಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.