ADVERTISEMENT

ಶೇ 5.2ಕ್ಕೆ ಇಳಿಯಲಿದೆ ಜಿಡಿಪಿ

2020–21ನೇ ಹಣಕಾಸು ವರ್ಷಕ್ಕೆ ಎಸ್‌ಆ್ಯಂಡ್‌ಪಿ ಅಂದಾಜು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 19:45 IST
Last Updated 23 ಮಾರ್ಚ್ 2020, 19:45 IST
ಜಿಡಿಪಿ
ಜಿಡಿಪಿ   

ನವದೆಹಲಿ (ಪಿಟಿಐ): 2020–21ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 5.2ರಷ್ಟು ಇರಲಿದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ರೇಟಿಂಗ್ಸ್‌ ಅಂದಾಜಿಸಿದೆ.

’ಕೊರೊನಾ–2‘ ವೈರಸ್‌ ವಿಶ್ವದಾದ್ಯಂತ ಆರ್ಥಿಕತೆ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳ ಫಲವಾಗಿ, ಇದೇ ಏಪ್ರಿಲ್‌ 1ರಿಂದ ಆರಂಭಗೊಳ್ಳಲಿರುವ ಹೊಸ ಹಣಕಾಸು ವರ್ಷದಲ್ಲಿ ಭಾರತದ ವೃದ್ಧಿ ದರವು ತನ್ನ ಈ ಮೊದಲಿನ ಶೇ 6.5ರ ಅಂದಾಜಿಗಿಂತ ಕಡಿಮೆಯಾಗಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಫಿಚ್‌ ರೇಟಿಂಗ್ಸ್‌, ಭಾರತದ ವೃದ್ಧಿ ದರವನ್ನು ಶೇ 5.6 ರಿಂದ ಶೇ 5.1ಕ್ಕೆ ತಗ್ಗಿಸಿದ ಬೆನ್ನಲ್ಲೇ ಈ ವರದಿ ಪ್ರಕಟಗೊಂಡಿದೆ.

ADVERTISEMENT

ಕೊರೊನಾ ವೈರಸ್‌ಗೆ ಕಡಿವಾಣ ಹಾಕಲು ಕೈಗೊಳ್ಳುತ್ತಿರುವ ಕ್ರಮಗಳು ಜಾಗತಿಕ ಆರ್ಥಿಕತೆಯನ್ನು ಹಿಂಜರಿತಕ್ಕೆ ದೂಡುವ ಸಾಧ್ಯತೆ ಇದೆ. ಇದರಿಂದ ಕಾರ್ಪೊರೇಟ್‌ ಸಾಲಗಾರರು ಸುಸ್ತಿದಾರರಾಗುವ ಪ್ರಮಾಣ ಹೆಚ್ಚಲಿದೆ. ಉದ್ದಿಮೆ ಜಗತ್ತಿನ ವಿಶ್ವಾಸ ಕುಸಿತ ಮತ್ತು ಕೌಟುಂಬಿಕ ಆದಾಯದಲ್ಲಿನ ನಷ್ಟದ ಕಾರಣಕ್ಕೆ ಸರಕುಗಳ ಪೂರೈಕೆ ಮತ್ತು ಬೇಡಿಕೆಯು ಗಮನಾರ್ಹವಾಗಿ ಕುಸಿಯಲಿದೆ. ನಿರುದ್ಯೋಗ ಹೆಚ್ಚಲಿದೆ ಎಂದು ತಿಳಿಸಿದೆ.

ಕೊರಾನಾ ಉಂಟು ಮಾಡಿರುವ ಆರ್ಥಿಕ ಸಂಕಷ್ಟದ ಫಲವಾಗಿ ಏಷ್ಯಾ – ಪೆಸಿಫಿಕ್‌ ಪ್ರದೇಶದ ದೇಶಗಳ ಆರ್ಥಿಕತೆಗೆ ₹ 43.40 ಲಕ್ಷ ಕೋಟಿ ಮೊತ್ತದ ನಷ್ಟ ಆಗಲಿದೆ ಎಂದು ಅಂದಾಜಿಸಿದೆ. ಈ ನಷ್ಟವು ಬ್ಯಾಂಕ್‌, ಕಾರ್ಪೊರೇಟ್‌, ಕೌಟುಂಬಿಕ ಆದಾಯಗಳಿಗೆ ಸೇರಿರುತ್ತದೆ ಎಂದು ತಿಳಿಸಿದೆ. ಪ್ರತಿಯೊಂದು ದೇಶಕ್ಕೆ ಆಗುವ ನಷ್ಟದ ಮೊತ್ತದ ವಿವರಗಳನ್ನು ನೀಡಲಾಗಿಲ್ಲ.

ಜಿಡಿಪಿ, ಹಣದುಬ್ಬರ ಮತ್ತು ಬಡ್ಡಿ ದರಕ್ಕೆ ಸಂಬಂಧಿಸಿದಂತೆಯೂ ಸಂಸ್ಥೆಯು ಪರಿಷ್ಕೃತ ಅಂದಾಜು ವರದಿ ಬಿಡುಗಡೆ ಮಾಡಿದೆ.

2020ರ ಏಪ್ರಿಲ್‌ನಿಂದ 2021ರ ಮಾರ್ಚ್‌ ಅವಧಿಯಲ್ಲಿ ಭಾರತದ ಜಿಡಿಪಿ ಶೇ 5.2ರಷ್ಟು ಇರಲಿದೆ. ನಂತರದ ವರ್ಷದಲ್ಲಿ (2021–22) ಶೇ 6.9ರಷ್ಟು ಇರಲಿದೆ. ಸದ್ಯದ ಹಣಕಾಸು ವರ್ಷಕ್ಕೆ (2019–20) ವೃದ್ದಿ ದರವು ಶೇ 5ರಷ್ಟು ಇರಲಿದೆ.

ಹಣದುಬ್ಬರ: ಮುಂದಿನ ಹಣಕಾಸು ವರ್ಷದಲ್ಲಿ ಹಣದುಬ್ಬರವು (ಶೇ 4.4) ಕಡಿಮೆಯಾಗಲಿದೆ. 2021–22ರಲ್ಲಿ ಬೆಲೆ ಏರಿಕೆ ಪ್ರಮಾಣವು ಇನ್ನಷ್ಟು ಕಡಿಮೆಯಾಗಲಿದೆ. ಆದರೆ, ನಂತರದ ವರ್ಷಗಳಲ್ಲಿ ಏರುಗತಿಯಲ್ಲಿ ಇರಲಿದೆ ಎಂದು ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.