ADVERTISEMENT

ಜಾಗತಿಕ ಆರ್ಥಿಕ ಪ್ರಗತಿ ಶೇ 1ಕ್ಕೆ ಇಳಿಕೆ: ವಿಶ್ವಸಂಸ್ಥೆ

ಪಿಟಿಐ
Published 2 ಏಪ್ರಿಲ್ 2020, 19:30 IST
Last Updated 2 ಏಪ್ರಿಲ್ 2020, 19:30 IST
   

ವಿಶ್ವಸಂಸ್ಥೆ: ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ‘ಕೊರೊನಾ–2’ ವೈರಸ್‌ ಪಿಡುಗಿನಿಂದಾಗಿ 2020ರಲ್ಲಿ ಜಾಗತಿಕ ಆರ್ಥಿಕ ವೃದ್ಧಿ ದರ ಶೇ 1ರಷ್ಟಕ್ಕೆ ಕುಸಿಯಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಸರ್ಕಾರಗಳು ಅಗತ್ಯವಾದ ವಿತ್ತೀಯ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸದಿದ್ದರೆ ಮತ್ತು ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳು ಮುಂದುವರೆಸಿದರೆ ವೃದ್ಧಿ ದರ ಇನ್ನಷ್ಟ ಕಡಿಮೆಯಾಗಬಹುದು ಎಂದೂ ಎಚ್ಚರಿಸಿದೆ.

‘ಕೋವಿಡ್‌–19‘ ಪಿಡುಗು ಜಾಗತಿಕ ಸರಕು ಪೂರೈಕೆ ಸರಣಿ ಮತ್ತು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಗಮನಾರ್ಹ ಪ್ರಮಾಣದಲ್ಲಿ ಅಡ್ಡಿಪಡಿಸಿದೆ. ಸರಿಸುಮಾರು 100 ದೇಶಗಳು ಮಾರ್ಚ್‌ನಲ್ಲಿ ತಮ್ಮ ಅಂತರರಾಷ್ಟ್ರೀಯ ಗಡಿ ಮುಚ್ಚಿದ್ದವು. ಇದರಿಂದ ಜನರ ಚಲನವಲನ ಮತ್ತು ಪ್ರವಾಸಿಗರ ಭೇಟಿ ಸಂಪೂರ್ಣವಾಗಿ ನಿಂತಿದೆ. ಈ ದೇಶಗಳಲ್ಲಿನ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಆರ್ಥಿಕ ವ್ಯವಸ್ಥೆ ಕುಸಿದು ಬೀಳುವುದನ್ನು ತಡೆಯಲು ಸರ್ಕಾರಗಳು ದೊಡ್ಡ ಮೊತ್ತದ ಉತ್ತೇಜನಾ ಕೊಡುಗೆ ಘೋಷಿಸುತ್ತಿವೆ.

ADVERTISEMENT

ಕುಸಿತ ಹೆಚ್ಚಳ ಸಾಧ್ಯತೆ: ಇಂತಹ ಕೊಡುಗೆಗಳ ಹೊರತಾಗಿಯೂ ಒಟ್ಟಾರೆ ಜಾಗತಿಕ ಆರ್ಥಿಕತೆ ತೀವ್ರ ಸ್ವರೂಪದ ಹಿಂಜರಿತಕ್ಕೆ ಒಳಗಾಗಲಿದೆ. ಜಾಗತಿಕ ಆರ್ಥಿಕತೆಯ ವೃದ್ಧಿ ದರವು ಶೇ 0.9ರಷ್ಟಕ್ಕೆ ಕುಸಿಯುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರಗಳು ಹಣಕಾಸು ಬೆಂಬಲ ನೀಡದಿದ್ದರೆ, ಗ್ರಾಹಕರ ವೆಚ್ಚ ಹೆಚ್ಚಲು ನೆರವಾಗದಿದ್ದರೆ ಕುಸಿತದ ಪ್ರಮಾಣವು ಇನ್ನಷ್ಟು ಹೆಚ್ಚಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯು (ಡಿಇಎಸ್‌ಎ) ಎಚ್ಚರಿಸಿದೆ.

ಕೊರೊನಾ ಹಾವಳಿ ಕಂಡುಬರುವುದಿಕ್ಕಿಂತ ಮುಂಚೆ, 2020ರಲ್ಲಿ ಜಾಗತಿಕ ಆರ್ಥಿಕ ವೃದ್ಧಿ ದರವು ಶೇ 2.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು.

ಆರ್ಥಿಕ ವೃದ್ಧಿಯ ಕುಸಿತದ ತೀವ್ರತೆಯು ಎರಡು ಪ್ರಮುಖ ಸಂಗತಿಗಳನ್ನು ಆಧರಿಸಿರುತ್ತದೆ. ಪ್ರಮುಖ ದೇಶಗಳಲ್ಲಿ ಜಾರಿಯಲ್ಲಿ ಇರುವ ಜನರ ಚಲನವಲನ, ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧದ ಅವಧಿ ಮತ್ತು ಸರ್ಕಾರಗಳು ಘೋಷಿಸಿರುವ ವಿತ್ತೀಯ ಕೊಡುಗೆಗಳ ಯಶಸ್ಸು ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಇಲಾಖೆ ತಿಳಿಸಿದೆ.

2008–09ರಲ್ಲಿ ಸಂಭವಿಸಿದ್ದ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕ ವೃದ್ಧಿ ದರ ಶೇ 1.7ರಷ್ಟಕ್ಕೆ ಕುಸಿದಿದ್ದನ್ನು ಇಲಾಖೆಯು ನೆನಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.