
ನವದೆಹಲಿ: ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಚಿನ್ನದ ಬೇಡಿಕೆಯು ತೂಕದ ಲೆಕ್ಕದಲ್ಲಿ ಶೇಕಡ 16ರಷ್ಟು ಕಡಿಮೆ ಆಗಿದೆ. ಈ ಅವಧಿಯಲ್ಲಿ ಚಿನ್ನದ ಬೆಲೆಯು ದುಬಾರಿ ಆಗಿದ್ದುದು ಬೇಡಿಕೆಯನ್ನು ತಗ್ಗಿಸಿದೆ.
ಆದರೆ ಈ ಅವಧಿಯಲ್ಲಿ ಹೂಡಿಕೆಯ ಲೆಕ್ಕದಲ್ಲಿ ಚಿನ್ನವನ್ನು ಖರೀದಿಸುವುದು ಹೆಚ್ಚಾಗಿದೆ ಎಂದು ವಿಶ್ವ ಚಿನ್ನ ಸಮಿತಿಯ (ಡಬ್ಲ್ಯುಜಿಸಿ) ವರದಿಯೊಂದು ಗುರುವಾರ ಹೇಳಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಗ್ರಾಹಕರಿಂದ ಒಟ್ಟು 209.4 ಟನ್ ಚಿನ್ನಕ್ಕೆ ಬೇಡಿಕೆ ಬಂದಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 248.3 ಟನ್ ಆಗಿತ್ತು.
ಆದರೆ ಮೌಲ್ಯದ ಲೆಕ್ಕದಲ್ಲಿ ನೋಡಿದಾಗ ಚಿನ್ನದ ಬೇಡಿಕೆಯು ಶೇ 23ರಷ್ಟು ಜಾಸ್ತಿ ಆಗಿದೆ. ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹1.65 ಲಕ್ಷ ಕೋಟಿ ಮೌಲ್ಯದ ಚಿನ್ನಕ್ಕೆ ಬೇಡಿಕೆ ಬಂದಿತ್ತು, ಅದು ಈ ಬಾರಿ ₹2.03 ಲಕ್ಷ ಕೋಟಿಗೆ ಹೆಚ್ಚಾಗಿದೆ. ಚಿನ್ನದ ಬೆಲೆಯು ತೀವ್ರ ಪ್ರಮಾಣದಲ್ಲಿ ಏರಿಕೆ ಕಂಡಿದ್ದುದು ಈ ಹೆಚ್ಚಳಕ್ಕೆ ಕಾರಣ.
ಚಿನ್ನಕ್ಕೆ ಬರುವ ಬೇಡಿಕೆಯಲ್ಲಿ ಆಭರಣದ ಪಾಲು ದೊಡ್ಡದು. ಸೆಪ್ಟೆಂಬರ್‌ನಲ್ಲಿ ಆಭರಣಕ್ಕಾಗಿ ಒಟ್ಟು 117.7 ಟನ್ ಚಿನ್ನಕ್ಕೆ ಬೇಡಿಕೆ ಬಂದಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 171.6 ಟನ್ ಆಗಿತ್ತು.
ಹೂಡಿಕೆಯ ಉದ್ದೇಶದಿಂದ ಚಿನ್ನಕ್ಕೆ ಬರುವ ಬೇಡಿಕೆಯಲ್ಲಿ ಶೇಕಡ 20ರಷ್ಟು ಏರಿಕೆ ಆಗಿದ್ದು, ಒಟ್ಟು 91.6 ಟನ್ ಚಿನ್ನಕ್ಕೆ ಬೇಡಿಕೆ ಬಂದಿದೆ. ಮೌಲ್ಯದ ಲೆಕ್ಕದಲ್ಲಿ ಇದು ಶೇ 74ರಷ್ಟು ಏರಿಕೆ ಎಂದು ಸಮಿತಿಯು ಹೇಳಿದೆ.