ADVERTISEMENT

‘ಹಬ್ಬ: 120 ಟನ್‌ ಚಿನ್ನಕ್ಕೆ ಬೇಡಿಕೆ’

ವಿಶ್ವನಾಥ ಎಸ್.
Published 21 ಅಕ್ಟೋಬರ್ 2023, 23:30 IST
Last Updated 21 ಅಕ್ಟೋಬರ್ 2023, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಈ ಬಾರಿಯ ಹಬ್ಬದ ಋತು ಮತ್ತು ಮದುವೆ ಸಮಾರಂಭಗಳಿಗೆ ಚಿನ್ನದ ಬೇಡಿಕೆ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ಚಿನ್ನಾಭರಣ ಉದ್ಯಮ ವ್ಯಕ್ತಪಡಿಸಿದೆ. ಆದರೆ,  ಜಾಗತಿಕ ವಿದ್ಯಮಾನಗಳು ಅದರಲ್ಲಿಯೂ ಮುಖ್ಯವಾಗಿ ಇಸ್ರೇಲ್‌–ಹಮಾಸ್‌ ಸಮರವು ಇನ್ನಷ್ಟು ತೀವ್ರಗೊಂಡಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡು, ಬೇಡಿಕೆ ತಗ್ಗಿಸುವ ಆತಂಕವನ್ನೂ ವ್ಯಕ್ತಪಡಿಸಿದೆ.

ಹಬ್ಬದ ಋತು ಆರಂಭ ಆಗಿದ್ದು ಚಿನ್ನಾಭರಣಗಳಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಮದುವೆ ಸಮಾರಂಭಗಳೂ ಇರುವುದರಿಂದ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಬೇಡಿಕೆ ಬರುವ ಅಂದಾಜು ಮಾಡಲಾಗಿದೆ. ಕಳೆದ ವರ್ಷ ಮದುವೆ ಮತ್ತು ಹಬ್ಬದ ಋತುವಿನಲ್ಲಿ ದೇಶದಲ್ಲಿ ಒಟ್ಟು 80 ಟನ್‌ನಷ್ಟು ಬೇಡಿಕೆ ಬಂದಿತ್ತು. ಈ ಬಾರಿ 120 ಟನ್‌ನಷ್ಟು ಬೇಡಿಕೆ ಬರುವ ನಿರೀಕ್ಷೆ ಇದೆ ಎಂದು ಇಂಡಿಯನ್‌ ಬುಲಿಯನ್ ಆ್ಯಂಡ್ ಜುವೆಲರಿ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಜೈನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಚಿನ್ನ ಖರೀದಿಗೆ ಆನ್‌ಲೈನ್‌ ಮೂಲಕ ಹಣ ಪಾವತಿಸುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಈ ಬಾರಿ ಕಾರ್ಡ್‌ ಮೂಲಕ ಹಣ ಪಾವತಿಸುವ ಆಯ್ಕೆಯನ್ನೇ ಗ್ರಾಹಕರು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.

ಚಿನ್ನಾಭರಣಗಳಿಗೆ ನಿತ್ಯ ಇರುವುದಕ್ಕಿಂತಲೂ ಶೇ 30ರಷ್ಟು ಅಧಿಕ ಬೇಡಿಕೆ ಸದ್ಯಕ್ಕೆ ಇದೆ. ಸದ್ಯದ ಬೇಡಿಕೆಯನ್ನು ಗಮನಿಸಿದರೆ, ಈ ಬಾರಿಯ ಹಬ್ಬದ ಋತು ಮತ್ತು ಮದುವೆ ಸಮಾರಂಭದಲ್ಲಿ ಚಿನ್ನಾಭರಣ ಮಾರಾಟವು ಕಳೆದ ವರ್ಷಕ್ಕಿಂತಲೂ ಶೇ 15 ರಿಂದ ಶೇ 20ರವರೆಗೆ ಏರಿಕೆ ಆಗುವ ನಿರೀಕ್ಷೆ ಮಾಡಲಾಗಿದೆ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ನಿರ್ದೇಶಕ ಎನ್‌. ವಿದ್ಯಾಸಾಗರ್ ತಿಳಿಸಿದರು.

‘ಹೂಡಿಕೆ ಮುಂದುಡುವುದೇ ಒಳಿತು’

ಇಸ್ರೇಲ್‌–ಹಮಾಸ್‌ ಸಂಘರ್ಷವು ಚಿನ್ನದ ಬೆಲೆ ಮತ್ತು ಬೇಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಂಭವ ಇದೆ. ಹೀಗಾಗಿ ಸದ್ಯದ ಮಟ್ಟಿಗೆ ಹೂಡಿಕೆಯ ಉದ್ದೇಶದಿಂದ ಚಿನ್ನದ ಮೇಲೆ ಹಣ ತೊಡಗಿಸದಿರುವುದೇ ಸೂಕ್ತ ಎನ್ನುವುದು ಉದ್ಯಮ ವಲಯದ ಅಭಿಪ್ರಾಯವಾಗಿದೆ. ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ಯುದ್ಧ ಆರಂಭಿಸಿದ ಬಳಿಕ ನಿಧಾನವಾಗಿ ಚಿನ್ನದ ದರ ಏರಿಕೆ ಕಾಣುತ್ತಿದೆ. 24 ಕ್ಯಾರಟ್‌ ಚಿನ್ನದ ಬೆಲೆಯು 20 ದಿನದಲ್ಲಿ ₹450 ಏರಿಕೆ ಕಂಡಿದೆ. ಶುಕ್ರವಾರದ ಅಂತ್ಯಕ್ಕೆ ಗ್ರಾಂಗೆ ₹6250ಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಇನ್ನಷ್ಟು ಏರಿಕೆ ಕಾಣುವ ಸಂಭವ ಇದೆ ಎಂದು ವಿದ್ಯಾಸಾಗರ್ ಹೇಳಿದರು. ಮುಂದೆ ಚಿನ್ನದ ದರದಲ್ಲಿ ಭಾರಿ ಏರಿಕೆ ಕಾಣಲಿದೆ ಎಂದು ಈಗಲೇ ಒಂದಿಷ್ಟು ಹೂಡಿಕೆ ಮಾಡುವ ಆಲೋಚನೆಯನ್ನು ಕೆಲವರು ಮಾಡಬಹುದು. ಆದರೆ ಈಗಿನ ಜಾಗತಿಕ ಬಿಕ್ಕಟ್ಟಿನ ತೀವ್ರತೆ ಕಡಿಮೆ ಆದರೆ ಅಥವಾ ಯುದ್ಧ ಅಂತ್ಯಗೊಂಡರೆ ಚಿನ್ನದ ಬೆಲೆಯು ಇಳಿಕೆ ಕಾಣಲು ಆರಂಭಿಸುತ್ತದೆ. ಹಾಗಾದಲ್ಲಿ ನಷ್ಟ ಅನುಭವಿಸಬೇಕಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಕುಮಾರ್ ಜೈನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.