ಚಿನ್ನ
ನವದೆಹಲಿ: ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆಯ ಹಾದಿಯಲ್ಲಿರುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಜಾಗತಿಕವಾಗಿ ತಯಾರಿಕಾ ಮತ್ತು ಸೇವಾ ವಲಯದ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ (ಪಿಎಂಐ) ದತ್ತಾಂವು ಈ ವಾರ ಬಿಡುಗಡೆ ಆಗಲಿದೆ. ಅಮೆರಿಕದ ಉದ್ಯೋಗ ದತ್ತಾಂಶವು ಪ್ರಕಟಗೊಳ್ಳಲಿದೆ. ಇದು ಹಳದಿ ಲೋಹದ ದರವನ್ನು ನಿರ್ಧರಿಸಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಅಮೆರಿಕದ ಆರ್ಥಿಕ ವಿಚಾರಗಳು, ದೇಶದಲ್ಲಿ ಹಬ್ಬಗಳ ಭಾಗವಾಗಿ ನಡೆಯುವ ಚಿನ್ನದ ಖರೀದಿಯು ದರ ಏರಿಕೆಗೆ ಕಾರಣವಾಗಲಿವೆ ಎಂದು ಸ್ಮಾರ್ಟ್‌ವೆಲ್ತ್.ಎಐನ ಸಂಸ್ಥಾಪಕ ಮತ್ತು ಪ್ರಧಾನ ಸಂಶೋಧಕ ಪಂಕಜ್ ಸಿಂಗ್ ಹೇಳಿದ್ದಾರೆ.
ವರ್ಷಾಂತ್ಯದ ವೇಳಗೆ ಫೆಡರಲ್ ರಿಸರ್ವ್ ಎರಡು ಬಾರಿ ಬಡ್ಡಿ ದರ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಹೂಡಿಕೆದಾರರು ಭಾವಿಸಿದ್ದಾರೆ. ಅಮೆರಿಕದ ಬಾಂಡ್ ಗಳಿಕೆ ಇಳಿಕೆಯಾಗಿರುವುದು ಮತ್ತು ಜಾಗತಿಕ ಅನಿಶ್ಚಿತತೆಗಳು ಚಿನ್ನವನ್ನು ಸುರಕ್ಷಿತ ಹೂಡಿಕೆಯ ತಾಣವಾಗಿಸಿವೆ ಎಂದು ಹೇಳಿದ್ದಾರೆ.
ಬೆಳ್ಳಿ ಕೆ.ಜಿಗೆ ₹1.70 ಲಕ್ಷ ತಲುಪುವ ನಿರೀಕ್ಷೆ
ಮುಂದಿನ ದಿನಗಳಲ್ಲಿ ಕೆ.ಜಿ ಬೆಳ್ಳಿ ದರವು ₹1.5 ಲಕ್ಷದಿಂದ ₹1.7 ಲಕ್ಷದವರೆಗೆ ತಲುಪುವ ನಿರೀಕ್ಷೆ ಇದೆ ಎಂದು ಜೆಎಂ ಫೈನಾನ್ಶಿಯಲ್ ಸರ್ವಿಸಸ್‌ನ ಪ್ರಣವ್ ಮೆರ್ ಹೇಳಿದ್ದಾರೆ. ಆದರೆ, ಲಾಭದ ಗಳಿಕೆಯ ವಹಿವಾಟಿಗೆ ಹೂಡಿಕೆದಾರರು ಮುಂದಾಗುವುದು ಮತ್ತು ಮಾರುಕಟ್ಟೆಯಲ್ಲಿನ ಇತರ ಬೆಳವಣಿಗೆಗಳು ಕೂಡ ದರದ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಹೇಳಿದ್ದಾರೆ. ಪ್ರಸಕ್ತ ವರ್ಷದಲ್ಲಿ ಚಿನ್ನದ ದರವು ಶೇ 45ರಷ್ಟು ಏರಿಕೆಯಾಗಿದ್ದರೆ, ಬೆಳ್ಳಿ ಶೇ 60ಕ್ಕೂ ಹೆಚ್ಚು ಏರಿಕೆ ಕಂಡಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.