ನವದೆಹಲಿ: ಚಿನ್ನದ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ 10 ಗ್ರಾಂಗೆ ₹2,700ರಷ್ಟು ಹೆಚ್ಚಳ ಕಂಡಿದೆ. ಶೇಕಡ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ಬೆಲೆಯು ದಾಖಲೆಯ ₹1,23,300ಕ್ಕೆ ತಲುಪಿದೆ.
ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ಖರೀದಿ ಹೆಚ್ಚಳ ಹಾಗೂ ಭಾರತದ ರೂಪಾಯಿ ಮೌಲ್ಯವು ಕುಸಿತ ಕಂಡಿದ್ದುದು ಬೆಲೆ ಏರಿಕೆಗೆ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.
ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 10 ಗ್ರಾಂ ಚಿನ್ನದ ಬೆಲೆಯು ₹1,20,600 ಆಗಿತ್ತು ಎಂದು ಅಖಿಲ ಭಾರತ ಸರಾಫ್ ಒಕ್ಕೂಟ ಹೇಳಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಶೇ 99.5ರಷ್ಟು ಪರಿಶುದ್ಧತೆಯ ಆಭರಣ ಚಿನ್ನದ ಬೆಲೆಯು 10 ಗ್ರಾಂಗೆ ₹2,700ರಷ್ಟು ಹೆಚ್ಚಾಗಿ ₹1,22,700ಕ್ಕೆ ತಲುಪಿದೆ.
‘ಚಿನ್ನದ ಬೆಲೆಯು ದಾಖಲೆಯ ಮಟ್ಟವನ್ನು ತಲುಪಿದ್ದರೂ ಹೂಡಿಕೆದಾರರಿಗೆ ಚಿನ್ನ ಬೇಕಾಗಿದೆ. ಹೀಗಾಗಿ ಸೋಮವಾರದ ವಹಿವಾಟಿನಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳ ಕಂಡಿದೆ. ಚಿನ್ನದ ಬೆಲೆಯು ಮತ್ತಷ್ಟು ಹೆಚ್ಚಬಹುದು ಎಂಬುದು ಅವರಲ್ಲಿನ ನಿರೀಕ್ಷೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ವಿಭಾಗದ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದಲ್ಲಿ ಸರ್ಕಾರದ ಚಟುವಟಿಕೆಗಳು ಸ್ಥಗಿತಗೊಂಡಿರುವುದು ದೀರ್ಘಾವಧಿಗೆ ಮುಂದುವರಿಯಬಹುದು, ಇದರ ಪರಿಣಾಮವು ಆರ್ಥಿಕ ಚಟುವಟಿಕೆಗಳ ಮೇಲೆಯೂ ಆಗಬಹುದು ಎಂಬ ಕಳವಳಗಳು ಸುರಕ್ಷಿತ ಹೂಡಿಕೆಯಾಗಿರುವ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಲು ಒಂದು ಕಾರಣ ಎಂದು ಸೌಮಿಲ್ ಗಾಂಧಿ ಅಂದಾಜಿಸಿದ್ದಾರೆ.
ಸೋಮವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಕೂಡ ಹೆಚ್ಚಳವಾಗಿದೆ. ಕೆ.ಜಿ. ಬೆಳ್ಳಿ ಬೆಲೆಯು ₹7,400ರಷ್ಟು ಹೆಚ್ಚಳ ಆಗಿದ್ದು ₹1,57,400ಕ್ಕೆ ತಲುಪಿದೆ.
ಸೋಮವಾರದ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯು ಶೇ 2ರಷ್ಟು, ಬೆಳ್ಳಿಯ ಬೆಲೆಯು ಶೇ 1ರಷ್ಟು ಏರಿಕೆ ಆಗಿದೆ.
‘ಡಾಲರ್ ದುರ್ಬಲ ಆಗುತ್ತಿರುವುದು, ಜಗತ್ತಿನ ವಿವಿಧ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವುದು, ಚಿನ್ನದ ಇಟಿಎಫ್‌ಗಳಿಗೆ ಬೇಡಿಕೆ ಹೆಚ್ಚಳ, ಸಣ್ಣ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚು ಹಣ ತೊಡಗಿಸುತ್ತಿರುವುದು ಚಿನ್ನದ ಬೇಡಿಕೆ ಹೆಚ್ಚಾಗುವುದಕ್ಕೆ ಕಾರಣ’ ಎಂದು ಆಗ್‌ಮಾಂಟ್ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥೆ ರೆನಿಶಾ ಚೈನಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.