ADVERTISEMENT

ಚಿನ್ನದ ಬೆಲೆ ಅನಿಶ್ಚಿತತೆಯ ಮಾಪಕ: ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ

'ಕಚ್ಚಾ ತೈಲದ ಜಾಗದಲ್ಲಿ ಈಗ ಹಳದಿ ಲೋಹ'

ಪಿಟಿಐ
Published 3 ಅಕ್ಟೋಬರ್ 2025, 15:57 IST
Last Updated 3 ಅಕ್ಟೋಬರ್ 2025, 15:57 IST
<div class="paragraphs"><p>ಸಂಜಯ್ ಮಲ್ಹೋತ್ರಾ </p></div>

ಸಂಜಯ್ ಮಲ್ಹೋತ್ರಾ

   

–ಪಿಟಿಐ ಚಿತ್ರ

ನವದೆಹಲಿ: ‘ಕಚ್ಚಾ ತೈಲದ ಬೆಲೆಯು ತೀರಾ ಈಚಿನವರೆಗೆ ಜಾಗತಿಕ ಅನಿಶ್ಚಿತತೆಗಳ ಮಾಪಕದಂತೆ ಕೆಲಸ ಮಾಡುತ್ತಿತ್ತು. ಈಗ ಆ ಸ್ಥಾನವನ್ನು ಚಿನ್ನದ ಬೆಲೆಯು ಆಕ್ರಮಿಸಿಕೊಂಡಿರುವಂತೆ ಕಾಣುತ್ತಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಶುಕ್ರವಾರ ಹೇಳಿದ್ದಾರೆ.

ADVERTISEMENT

ವಿತ್ತೀಯ ದೃಷ್ಟಿಯಿಂದ ಈ ಸಂದರ್ಭದಲ್ಲಿ ಜಗತ್ತಿನ ಬಹುತೇಕ ದೇಶಗಳು ಒತ್ತಡಕ್ಕೆ ಸಿಲುಕಿವೆ. ಇಂದಿನ ವ್ಯಾಪಾರ ನೀತಿಗಳು ಕೆಲವು ದೇಶಗಳ ಆರ್ಥಿಕ ಬೆಳವಣಿಗೆಯನ್ನು ಹಾಳುಮಾಡಬಹುದು. ಜಾಗತಿಕ ಮಟ್ಟದಲ್ಲಿ ಷೇರುಪೇಟೆಗಳಲ್ಲಿ ಒಂದಿಷ್ಟು ಕುಸಿತ ಎದುರಾಗಬಹುದು ಎಂದು ಮಲ್ಹೋತ್ರಾ ಅವರು ಎಚ್ಚರಿಕೆ ನೀಡಿದ್ದಾರೆ.

ರೆಪೊ ದರವನ್ನು ಶೇಕಡ 5.5ರ ಮಟ್ಟದಲ್ಲಿ ಕಾಯ್ದುಕೊಳ್ಳುವ ತೀರ್ಮಾನವನ್ನು ಬುಧವಾರ ತೆಗೆದುಕೊಂಡ ಸಂದರ್ಭದಲ್ಲಿ ಆರ್‌ಬಿಐ, ಜಾಗತಿಕ ಅರ್ಥ ವ್ಯವಸ್ಥೆಯು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಗಟ್ಟಿತನವನ್ನು ತೋರಿಸಿದೆಯಾದರೂ, ಮುನ್ನೋಟವು ಅಷ್ಟೊಂದು ಸ್ಪಷ್ಟವಾಗಿಲ್ಲ ಎಂದು ಹೇಳಿದೆ. 

‘ಹಿಂದಿನ ದಶಕದಲ್ಲಿ ಜಾಗತಿಕ ಮಟ್ಟದ ಬಿಕ್ಕಟ್ಟುಗಳು ಕಚ್ಚಾ ತೈಲ ಬೆಲೆ ಏರಿಕೆಗೆ ಕಾರಣವಾಗುತ್ತಿದ್ದವು. ಅಂತಹ ಬಿಕ್ಕಟ್ಟುಗಳು ಈಗ ಎದುರಾಗಿದ್ದರೂ, ಕಚ್ಚಾ ತೈಲದ ಬೆಲೆಯು ಒಂದು ಹಂತದಲ್ಲಿ ಮಾತ್ರ ಏರಿಳಿತ ಕಾಣುತ್ತಿದೆ. ದೇಶದ ಒಟ್ಟು ಜಿಡಿಪಿಯಲ್ಲಿ ಕಚ್ಚಾ ತೈಲದ ಮಹತ್ವವು ಕಡಿಮೆ ಆಗಿರುವುದು ಇದಕ್ಕೆ ಕಾರಣ ಆಗಿರಬಹುದು. ಇದು ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದ ಇತರೆಡೆಗಳಲ್ಲಿಯೂ ಆಗಿದೆ’ ಎಂದು ಮಲ್ಹೋತ್ರಾ ಹೇಳಿದ್ದಾರೆ.

‘ಬಹುಶಃ ಈಗ ಚಿನ್ನದ ಬೆಲೆಯು ಜಾಗತಿಕ ಅನಿಶ್ಚಿತತೆಯ ಮಾಪಕದಂತೆ ಕೆಲಸ ಮಾಡುತ್ತಿದೆ’ ಎಂದು ಅವರು ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶದಲ್ಲಿ ಹೇಳಿದ್ದಾರೆ.

ತಂತ್ರಜ್ಞಾನ ವಲಯದ ಕೆಲವು ಷೇರುಗಳ ಬೆಲೆಯು ಜಾಗತಿಕ ಷೇರುಪೇಟೆಗಳ ಒಟ್ಟಾರೆ ಏರಿಕೆಗೆ ಕಾರಣವಾಗಿರುವ ಬಗ್ಗೆ ಅನಿಸಿಕೆ ಹಂಚಿಕೊಂಡ ಅವರು, ‘ಷೇರುಪೇಟೆಗಳಲ್ಲಿ ಕುಸಿತವೊಂದು ಎದುರಾಗಬಹುದು’ ಎಂದು ಎಚ್ಚರಿಸಿದ್ದಾರೆ.

ದೇಶದ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳು ಬಲಿಷ್ಠವಾಗಿ ಇವೆ. ಜಗತ್ತಿನಲ್ಲಿ ಅನಿಶ್ಚಿತತೆ ಇದ್ದರೂ ಭಾರತದಲ್ಲಿ ಸ್ಥಿರತೆ ಇದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

ಹಣದುಬ್ಬರ ಕಡಿಮೆ ಇರುವುದು, ವಿದೇಶಿ ವಿನಿಮಯ ಸಂಗ್ರಹವು ಚೆನ್ನಾಗಿ ಇರುವುದು, ಚಾಲ್ತಿ ಖಾತೆ ಕೊರತೆ ಕಡಿಮೆ ಆಗಿರುವುದು ಹಾಗೂ ಬ್ಯಾಂಕ್‌ ಮತ್ತು ಕಾರ್ಪೊರೇಟ್ ಕಂಪನಿಗಳ ಲೆಕ್ಕಪತ್ರವು ಸುಸ್ಥಿತಿಯಲ್ಲಿ ಇರುವುದು ಇದಕ್ಕೆ ಕಾರಣ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.