ಬೆಂಗಳೂರು:ಕೊರೊನಾ ಭೀತಿಯಿಂದ ಷೇರುಪೇಟೆ ಸೂಚ್ಯಂಕ ಇಳಿಕೆಯಾಗುತ್ತಿದ್ದರೆ, ಚಿನ್ನದ ಬೆಲೆ ಗಗನಮುಖಿಯಾಗಿದೆ. ಬುಧವಾರ ಎಂಸಿಎಕ್ಸ್ನಲ್ಲಿ ಗೋಲ್ಡ್ ಫ್ಯೂಚರ್ಸ್ 10 ಗ್ರಾಂ ದರ ಶೇ 0.5ರಷ್ಟು (₹213) ಏರಿಕೆಯೊಂದಿಗೆ ₹43,687 ಮುಟ್ಟಿತು.
ಕಳೆದ ವಹಿವಾಟಿನಲ್ಲಿ 10 ಗ್ರಾಂ ಗೋಲ್ಡ್ ಫ್ಯೂಚರ್ ಶೇ 3.6 (₹1,544) ಹೆಚ್ಚಳವಾಗಿತ್ತು. ಬೆಳ್ಳಿ (ಸಿಲ್ವರ್ ಫ್ಯೂಚರ್ಸ್) ಸಹ ಪ್ರತಿ ಕೆ.ಜಿಗೆ ಶೇ 1ರಷ್ಟು ಏರಿಕೆಯೊಂದಿಗೆ ₹46,798 ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರಿಕೆಯು ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುವಂತೆ ಮಾಡಿದೆ.
ಹಿಂದಿನ ವಹಿವಾಟಿನಲ್ಲೂ ಬೆಳ್ಳಿ ಶೇ 3ರಷ್ಟು (₹1,295) ಏರಿಕಯಾಗಿತ್ತು. ಭಾರತ ಬಹುಪಾಲು ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ ಗ್ರಾಹಕರಿಗೆ ಚಿನ್ನ ಖರೀದಿ ಮೇಲೆ ತೆರಿಗೆಯ ಹೊರೆ ಬೀಳುತ್ತದೆ. ಶೇ 12.5ರಷ್ಟು ಆಮದು ಸುಂಕ ಮತ್ತು ಶೇ 3ರಷ್ಟು ಜಿಎಸ್ಟಿ ಸೇರುತ್ತದೆ. ಪ್ರಸ್ತುತ ದೇಶದಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ ₹43,788 ಆಗಿದೆ.
ಡಾಲರ್ ಎದುರು ರೂಪಾಯಿ ₹73.50ರಲ್ಲಿ ವಹಿವಾಟು ನಡೆದಿದೆ.
ಸರ್ಕಾರದ ಈ ಬಾರಿಯ 'ಗೋಲ್ಡ್ ಬಾಂಡ್' ಪಡೆಯಲು ಅರ್ಜಿ ಸಲ್ಲಿಕೆಗೆ ಮಾರ್ಚ್ 6 ಕೊನೆಯ ದಿನವಾಗಿದೆ. ಪ್ರತಿ ಗ್ರಾಂ ಚಿನ್ನಕ್ಕೆ ₹4,260 ನಿಗದಿ ಪಡಿಸಲಾಗಿದ್ದು, ಆನ್ಲೈನ್ ಪಾವತಿ ಮೂಲಕ ಬಾಂಡ್ ಪಡೆಯುವವರಿಗೆ ಪ್ರತಿ ಗ್ರಾಂಗೆ ₹50 ರಿಯಾಯಿತಿ ಸಿಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.