ADVERTISEMENT

ಚಿನ್ನದ ಬೆಲೆ ದಿಢೀರ್‌ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 20:26 IST
Last Updated 20 ಜೂನ್ 2019, 20:26 IST
ಚಿನ್ನದ ಗಟ್ಟಿ
ಚಿನ್ನದ ಗಟ್ಟಿ   

ಬೆಂಗಳೂರು: ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ದರವು ಗುರುವಾರದ ವಹಿವಾಟಿನಲ್ಲಿ ಗಮನಾರ್ಹ ಏರಿಕೆ ದಾಖಲಿಸಿತು.

ಮುಂಬೈನಲ್ಲಿ ಸ್ಟ್ಯಾಂಡರ್ಡ್‌ ಚಿನ್ನ ತಲಾ 10 ಗ್ರಾಂಗಳಿಗೆ ₹ 33,559ಕ್ಕೆ ಮತ್ತು ಅಪರಂಜಿ ಚಿನ್ನ ₹ 33,694ಕ್ಕೆ ತಲುಪಿದೆ. ಬೆಂಗಳೂರು ಪೇಟೆಯಲ್ಲಿ ಸ್ಟ್ಯಾಂಡರ್ಡ್‌ ಚಿನ್ನ ₹ 33,805ಕ್ಕೆ ತಲುಪಿದೆ. ದೆಹಲಿ ಮಾರುಕಟ್ಟೆಯಲ್ಲಿ ತಲಾ 10 ಗ್ರಾಂಗಳಿಗೆ ₹ 280ರಂತೆ ಏರಿಕೆ ಕಂಡು ₹ 34 ಸಾವಿರದ ಗಡಿ ದಾಟಿದೆ. ಬುಧವಾರ ಮತ್ತು ಗುರುವಾರದ ಬೆಲೆಯಲ್ಲಿ ಸರಾಸರಿ ₹ 700ರಷ್ಟು ವ್ಯತ್ಯಾಸ ಕಂಡುಬಂದಿದೆ.

ಸುರಕ್ಷಿತ ಹೂಡಿಕೆಯಾಗಿರುವ ಚಿನ್ನಕ್ಕೆ ದಿನೇ ದಿನೇ ಬೇಡಿಕೆ ಹೆ‌ಚ್ಚುತ್ತಿದೆ. ಒಂದು ತಿಂಗಳಿನಿಂದೀಚೆಗೆ ಚಿನ್ನದ ದರ ಏರಿಕೆ ಹಾದಿಯಲ್ಲಿ ಇದೆ. ವಾಣಿಜ್ಯ ಸಮರದ ಉದ್ವಿಗ್ನತೆ ಕಾರಣಕ್ಕೆ ಜಾಗತಿಕ ಆರ್ಥಿಕ ವೃದ್ಧಿ ದರ ದುರ್ಬಲಗೊಳ್ಳಲಿದೆ. ಹೀಗಾಗಿ ಹೂಡಿಕೆದಾರರು ಚಿನ್ನ ಖರೀದಿಯತ್ತ ಗಮನ ಕೇಂದ್ರೀಕರಿಸಿದ್ದಾರೆ. ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳೂ ಚಿನ್ನ ಖರೀದಿಗೆ ಮುಂದಾಗಿವೆ. ಈ ಎಲ್ಲ ಕಾರಣಕ್ಕೆ ಬೆಲೆ ಹೆಚ್ಚಳಗೊಳ್ಳುತ್ತಿದೆ.

ADVERTISEMENT

ಈ ವರ್ಷ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ಬಗ್ಗೆ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆಗಿರುವ ಫೆಡರಲ್‌ ರಿಸರ್ವ್‌ ಇಂಗಿತ ವ್ಯಕ್ತಪಡಿಸಿರುವುದು ಚಿನ್ನದ ಬೆಲೆಯು ಗುರುವಾರ ದಿಢೀರನೆ ಹೆಚ್ಚಳಗೊಳ್ಳಲು ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.