ADVERTISEMENT

ಚಿನ್ನದ ದರ ಏರುಗತಿ

ಪಿಟಿಐ
Published 25 ಜೂನ್ 2019, 19:48 IST
Last Updated 25 ಜೂನ್ 2019, 19:48 IST
ಚಿನ್ನದ ದರ
ಚಿನ್ನದ ದರ   

ನವದೆಹಲಿ: ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಚಿನ್ನದ ಬೆಲೆಯು ನಿರಂತರವಾಗಿ ಏರುಗತಿಯಲ್ಲಿದ್ದು, ಮಂಗಳವಾರದ ವಹಿವಾಟಿನಲ್ಲಿ ತಲಾ 10 ಗ್ರಾಂಗಳ ಬೆಲೆಯು ಬೇರೆ, ಬೇರೆ ಮಾರುಕಟ್ಟೆಗಳಲ್ಲಿ ₹200ರಿಂದ ₹422ರವರೆಗೆ ಏರಿಕೆ ಕಂಡಿದೆ.

ಸೋಮವಾರದ ಬೆಲೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ₹281 (₹34,465), ಮುಂಬೈನಲ್ಲಿ ₹422 (₹34,450) ಮತ್ತು ದೆಹಲಿಯಲ್ಲಿ ₹200ರಂತೆ (₹34,470) ಹೆಚ್ಚಳವಾಗಿದೆ.

ಹೂಡಿಕೆದಾರರ, ಸ್ಥಳೀಯ ಚಿನ್ನಾಭರಣ ವ್ಯಾಪಾರಿಗಳ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಬೇಡಿಕೆ ಹೆಚ್ಚಳದ ಕಾರಣಕ್ಕೆ ಬೆಲೆಯು ಗಣನೀಯವಾಗಿ ಏರಿಕೆ ಕಾಣುತ್ತಿದೆ.

ADVERTISEMENT

ಅಮೆರಿಕ ಮತ್ತು ಇರಾನ್‌ ನಡುವಣ ಸಂಘರ್ಷ ಉಲ್ಬಣಗೊಂಡಿರುವುದರಿಂದ ಚಿನ್ನದ ಬೆಲೆ ಆರು ವರ್ಷಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸುರಕ್ಷಿತ ಹೂಡಿಕೆಯ ಸ್ವರ್ಗವಾಗಿರುವ ಚಿನ್ನದಲ್ಲಿ ಹಣ ತೊಡಗಿಸಲು ಹೂಡಿಕೆದಾರರು ಮುಗಿ ಬಿದ್ದಿರುವುದರಿಂದ ಹಳದಿ ಲೋಹದ ಬೆಲೆಯು ನಿರಂತರ ಏರಿಕೆ ಕಾಣುತ್ತಿದೆ.

ವಿಶ್ವದ ಇತರ ಪ್ರಮುಖ ಕರೆನ್ಸಿಗಳ ಎದುರು ಡಾಲರ್‌ ವಿನಿಮಯ ದರ ಕುಸಿತ ಕಂಡಿರುವುದು, ಬಾಂಡ್‌ ಗಳಿಕೆ ಕಡಿಮೆಯಾಗಿರುವುದು, ನಿಧಾನಗತಿಯ ಜಾಗತಿಕ ಆರ್ಥಿಕ ವೃದ್ಧಿ ದರ, ಆರ್ಥಿಕ ಅನಿಶ್ಚಿತತೆ ಮತ್ತು ವಾಣಿಜ್ಯ ಮಾತುಕತೆಗೆ ಸಂಬಂಧಿಸಿದ ಕಳವಳವು ಚಿನ್ನದ ಖರೀದಿಗೆ ಒತ್ತು ನೀಡಿವೆ.

ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನದ ಖರೀದಿಯನ್ನು ತ್ವರಿತಗೊಳಿಸಿರುವುದೂ ಬೆಲೆ ಏರಿಕೆಗೆ ಇಂಬು ನೀಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ನ ಬೆಲೆಯು (28.34 ಗ್ರಾಂ) ₹ 1 ಲಕ್ಷಕ್ಕೆ ತಲುಪಿದೆ. 2013ರಿಂದೀಚೆಗೆ ಮೊದಲ ಬಾರಿಗೆ $ 1,400ರ ಗಡಿ ದಾಟಿದೆ. ನಾಲ್ಕು ವಾರಗಳಲ್ಲಿ ಬೆಲೆಯು ಶೇ 10ರಷ್ಟು ಹೆಚ್ಚಳಗೊಂಡಿದೆ.

ದುಬಾರಿ ಬೆಳ್ಳಿ: ಬೆಳ್ಳಿ ಬೆಲೆಯೂ ಚಿನ್ನದ ಹಾದಿಯಲ್ಲಿಯೇ ಸಾಗಿದೆ. ನಾಣ್ಯ ತಯಾರಕರು ಮತ್ತು ಕೈಗಾರಿಕಾ ಘಟಕಗಳ ಬೇಡಿಕೆ ಹೆಚ್ಚಿದ್ದರಿಂದ ತಲಾ ಕೆಜಿ ಬೆಲೆಯು ₹ 110ರಂತೆ ಏರಿಕೆಯಾಗಿ ₹ 39,200ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.