ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.
ಬೆಳ್ಳಿ ಧಾರಣೆ ಕೆ.ಜಿಗೆ ₹4 ಸಾವಿರ ಏರಿಕೆಯಾಗಿದ್ದು, ₹1.32 ಲಕ್ಷವಾಗಿದೆ. 10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹700 ಹೆಚ್ಚಳವಾಗಿ, ₹1,13,800ರಂತೆ ಮಾರಾಟವಾಗಿದೆ. ಆಭರಣ ಚಿನ್ನದ ಬೆಲೆಯು (ಶೇ 99.5 ಪರಿಶುದ್ಧತೆ) ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ, ₹1,13,300 ಆಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಕಳೆದ ಡಿಸೆಂಬರ್ 31ರಿಂದ ಇದುವರೆಗೆ ಚಿನ್ನದ ಬೆಲೆಯಲ್ಲಿ ಶೇ 44ರಷ್ಟು ಏರಿಕೆ ಆಗಿದ್ದರೆ, ಬೆಳ್ಳಿ ದರವು ಶೇ 47ರಷ್ಟು ಹೆಚ್ಚಳವಾಗಿದೆ. ಮೌಲ್ಯದ ಲೆಕ್ಕದಲ್ಲಿ ಕ್ರಮವಾಗಿ ₹34,850 ಮತ್ತು ₹42,300 ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಶೀಘ್ರದಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಹೆಚ್ಚಿದೆ. ಇದು ಹೂಡಿಕೆದಾರರು ಚಿನ್ನವನ್ನು ಖರೀದಿಸಲು ಉತ್ತೇಜನ ನೀಡಿದ್ದರಿಂದ ಹಳದಿ ಲೋಹದ ದರ ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
ಕೈಗಾರಿಕೆಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗಿದೆ. ಹೀಗಾಗಿ ಬೆಳ್ಳಿ ದರ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.