ADVERTISEMENT

ಚಿನ್ನ, ಬೆಳ್ಳಿ ಧಾರಣೆ: 3 ದಿನದಲ್ಲಿ ₹5 ಸಾವಿರ ಇಳಿಕೆ

ಪಿಟಿಐ
Published 25 ಜುಲೈ 2024, 15:40 IST
Last Updated 25 ಜುಲೈ 2024, 15:40 IST
<div class="paragraphs"><p>ಚಿನ್ನ, ಬೆಳ್ಳಿ</p></div>

ಚಿನ್ನ, ಬೆಳ್ಳಿ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಧಾರಣೆಯು ಇಳಿಕೆಯತ್ತ ಸಾಗಿದೆ.

ADVERTISEMENT

ಗುರುವಾರ ಕೂಡ ಚಿನ್ನದ ದರ ಪ್ರತಿ 10 ಗ್ರಾಂಗೆ ₹1,000 ಇಳಿಕೆಯಾಗಿದ್ದು, ₹70,650 ಆಗಿದೆ. ಸತತ ಮೂರು ದಿನಗಳಿಂದ ಒಟ್ಟಾರೆ ₹5,000 ಕಡಿಮೆಯಾಗಿದೆ.

ಕೇಂದ್ರ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲೆ ವಿಧಿಸುತ್ತಿದ್ದ ಕಸ್ಟಮ್ಸ್‌ ಸುಂಕವನ್ನು ಶೇ 15ರಿಂದ ಶೇ 6ಕ್ಕೆ ಇಳಿಸಲಾಗಿದೆ. ಇದರಿಂದ ದರ ಇಳಿಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಅಲ್ಲದೆ, ಮತ್ತಷ್ಟು ಬೆಲೆ ಇಳಿಕೆಯಾಗಬಹುದು ಎಂಬ ಆತಂಕದಿಂದಾಗಿ ಆಭರಣ ತಯಾರಕರು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಧಾರಣೆ ಕುಸಿದಿದೆ’ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್ ಹೇಳಿದೆ.

ಬೆಳ್ಳಿ ಬೆಲೆಯೂ ಇಳಿಕೆ:

ಪ್ರತಿ ಕೆ.ಜಿ ಬೆಳ್ಳಿ ಧಾರಣೆಯೂ 3,500 ಇಳಿಕೆಯಾಗಿದ್ದು, ₹84,000ಕ್ಕೆ ಮಾರಾಟವಾಗಿದೆ. 

ಜುಲೈ 23ರಂದು ನಡೆದ ವಹಿವಾಟಿನಲ್ಲಿ ಬೆಳ್ಳಿ ಬೆಲೆಯು ₹3,350 ಕುಸಿದಿತ್ತು. ಪ್ರಸಕ್ತ ವರ್ಷದಲ್ಲಿ ಮೊದಲು ಬಾರಿಗೆ ಇಷ್ಟು ಪ್ರಮಾಣದಲ್ಲಿ ಬೆಲೆಯು ಇಳಿಕೆ ಕಂಡಿತ್ತು. ಕಳೆದ ಮೂರು ದಿನಗಳಲ್ಲಿ ಒಟ್ಟಾರೆ ₹5,000 ಬೆಲೆ ಕಡಿಮೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆಯು ಪ್ರತಿ ಔನ್ಸ್‌ಗೆ (28.34 ಗ್ರಾಂ) ₹3,536 (42.20 ಡಾಲರ್‌) ಇಳಿಕೆಯಾಗಿದೆ. ನ್ಯೂಯಾರ್ಕ್‌ ಮಾರುಕಟ್ಟೆಯಲ್ಲಿ ಬೆಳ್ಳಿ ದರವು ಪ್ರತಿ ಔನ್ಸ್‌ಗೆ ₹2,349 (28.04 ಡಾಲರ್) ಇಳಿಕೆಯಾಗಿದೆ.

ಜಾಗತಿಕ ಕಾರಣ ಏನು?
ಮಾರ್ಚ್‌ನಲ್ಲಿ ಬ್ಯಾಂಕ್‌ ಆಫ್‌ ಜಪಾನ್‌ ಬಡ್ಡಿದರವನ್ನು ಹೆಚ್ಚಿಸಿತ್ತು. ಇದರಿಂದ ಜಪಾನ್‌ನಲ್ಲಿ ಎಂಟು ವರ್ಷಗಳ ಕಾಲ ಕಾಯ್ದುಕೊಂಡಿದ್ದ ಋಣಾತ್ಮಕ ಬಡ್ಡಿದರ ನೀತಿಯು ಮುಕ್ತಾಯಗೊಂಡಿತ್ತು. ‘ಮುಂದಿನ ವಾರ ಬ್ಯಾಂಕ್‌ ಆಫ್‌ ಜಪಾನ್‌ನ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದ್ದು ಮತ್ತೆ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆಯಿದೆ. ಇದರಿಂದ ಜಪಾನ್‌ ಕರೆನ್ಸಿ ಯೆನ್‌ ಮೌಲ್ಯ ವೃದ್ಧಿಯಾಗಿದೆ. ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಇಳಿಕೆಯ ಹಾದಿ ತುಳಿಯುವ ನಿರೀಕ್ಷೆಯಿದೆ. ಹಾಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಮುಖವಾಗುತ್ತಿದೆ’ ಎಂದು ಜಿ.ಎಂ. ಫೈನಾನ್ಶಿಯಲ್‌ನ ಸಂಶೋಧನಾ ವಿಭಾಗದ (ಸರಕು ಮತ್ತು ಕರೆನ್ಸಿ) ಉಪಾಧ್ಯಕ್ಷ ಪ್ರಣವ್ ಮೆರ್‌ ಹೇಳಿದ್ದಾರೆ. ‘ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌‌ ಬಡ್ಡಿದರ ಕಡಿತಕ್ಕೆ ಮುಂದಾಗಿಲ್ಲ. ಚಿಲ್ಲರೆ ಹಣದುಬ್ಬರದ ಇಳಿಕೆಯತ್ತ ಗಮನ ಕೇಂದ್ರೀಕರಿಸಿದೆ. ಇದು ಕೂಡ ಚಿನ್ನದ ದರ ಕಡಿಮೆಯಾಗಲು ಕಾರಣವಾಗಿದೆ’ ಎಂದು ಹೇಳಿದ್ದಾರೆ.  ‘ಯುರೋಪಿಯನ್‌ ಮಾರುಕಟ್ಟೆಯಲ್ಲೂ ಚಿನ್ನ ಧಾರಣೆಯು ಇಳಿಕೆಯಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್‌ ಗಾಂಧಿ ತಿಳಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.