ADVERTISEMENT

ಗೂಗಲ್‌ನಲ್ಲಿ 12 ಸಾವಿರ ನೌಕರರ ವಜಾ: ನಿರೀಕ್ಷಿತ ಆರ್ಥಿಕ ಹಿಂಜರಿತಕ್ಕೆ ತಯಾರಿ?

ತೀವ್ರ ವಿಷಾದ ವ್ಯಕ್ತಪಡಿಸಿದ ಸಿಇಒ ಸುಂದರ್ ಪಿಚೈ

ಪಿಟಿಐ
Published 20 ಜನವರಿ 2023, 13:13 IST
Last Updated 20 ಜನವರಿ 2023, 13:13 IST
ಗೂಗಲ್
ಗೂಗಲ್   

ನ್ಯೂಯಾರ್ಕ್‌: ಗೂಗಲ್ ಕಂಪನಿಯು ಒಟ್ಟು 12 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಭೀತಿಯ ನಡುವೆ ನೌಕರರನ್ನು ಕೆಲಸದಿಂದ ತೆಗೆಯುತ್ತಿರುವ ತಂತ್ರಜ್ಞಾನ ಕಂಪನಿಗಳ ಸಾಲಿಗೆ ಈಗ ಗೂಗಲ್ ಕೂಡ ಸೇರಿದೆ.

‘ತುಸು ತಾಪತ್ರಯದ ಸುದ್ದಿಯೊಂದನ್ನು ನಾನು ಹಂಚಿಕೊಳ್ಳಬೇಕಿದೆ. ನಾವು ನಮ್ಮ ನೌಕರರ ಸಂಖ್ಯೆಯನ್ನು 12 ಸಾವಿರದಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದೇವೆ’ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸುಂದರ್ ಪಿಚೈ ಅವರು ನೌಕರರಿಗೆ ಬರೆದಿರುವ ಇ–ಮೇಲ್‌ನಲ್ಲಿ ಹೇಳಿದ್ದಾರೆ.

ಉದ್ಯೋಗ ಕಡಿತವು ಎಲ್ಲ ಪ್ರದೇಶಗಳಿಗೂ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ‘ಕಳೆದ ಎರಡು ವರ್ಷಗಳಲ್ಲಿ ನಾವು ನಾಟಕೀಯ ಬೆಳವಣಿಗೆಯ ಸಂದರ್ಭಗಳನ್ನು ನೋಡಿದ್ದೇವೆ. ಆ ಬೆಳವಣಿಗೆಗೆ ಅನುಗುಣವಾಗಿ ಹಾಗೂ ಅದಕ್ಕೆ ಇನ್ನಷ್ಟು ಇಂಬು ಕೊಡುವ ಉದ್ದೇಶದಿಂದ ನಾವು ಅಂದಿನ ಆರ್ಥಿಕ ವಾಸ್ತವಗಳಿಗೆ ಹೊಂದಿಕೆಯಾಗುವಂತೆ ನೇಮಕಾತಿ ನಡೆಸಿದೆವು. ಆದರೆ ಇಂದಿನ ವಾಸ್ತವ ಬೇರೆ’ ಎಂದು ಪಿಚೈ ಅವರು ಇ–ಮೇಲ್‌ನಲ್ಲಿ ವಿವರಿಸಿದ್ದಾರೆ.

ADVERTISEMENT

ಈ ವಾರದ ಆರಂಭದಲ್ಲಿ ಮೈಕ್ರೊಸಾಫ್ಟ್‌ ಕಂಪನಿಯು ತಾನು 10 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುತ್ತಿರುವುದಾಗಿ ಪ್ರಕಟಿಸಿತು. ಅಮೆಜಾನ್‌ ಕೂಡ 18 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುತ್ತಿದೆ. ಮೆಟಾ ಕಂಪನಿಯು 11 ಸಾವಿರ ಜನರನ್ನು ವಜಾಗೊಳಿಸುತ್ತಿದೆ.

‘ಅಮೆರಿಕದಲ್ಲಿ ನಾವು ಸಂಬಂಧಿಸಿದ ಉದ್ಯೋಗಿಗಳಿಗೆ ಪ್ರತ್ಯೇಕ ಇ–ಮೇಲ್ ಕಳುಹಿಸಿದ್ದೇವೆ. ಇತರ ದೇಶಗಳಲ್ಲಿ ಅಲ್ಲಿನ ಕಾನೂನು ಹಾಗೂ ಪದ್ಧತಿಗಳ ಕಾರಣದಿಂದಾಗಿ ಈ ‍ಪ್ರಕ್ರಿಯೆಯು ವಿಳಂಬವಾಗಲಿದೆ’ ಎಂದು ಪಿಚೈ ತಿಳಿಸಿದ್ದಾರೆ. ಉದ್ಯೋಗ ಕಡಿತಕ್ಕೆ ಅವರು ತೀವ್ರ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಈ ರೀತಿ ಆಗುತ್ತಿರುವುದಕ್ಕೆ ತಾವು ಸಂಪೂರ್ಣ ಹೊಣೆ ಹೊರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.