ADVERTISEMENT

ಏರ್‌ಟೆಲ್‌ನಲ್ಲಿ ಗೂಗಲ್‌ನಿಂದ ₹ 7,500 ಕೋಟಿ ಹೂಡಿಕೆ

ಪಿಟಿಐ
Published 28 ಜನವರಿ 2022, 14:29 IST
Last Updated 28 ಜನವರಿ 2022, 14:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗೂಗಲ್ ಕಂಪನಿಯು ಭಾರ್ತಿ ಏರ್‌ಟೆಲ್‌ನಲ್ಲಿ ₹ 7,500 ಕೋಟಿ ಹೂಡಿಕೆ ಮಾಡಲಿದೆ. ಹೂಡಿಕೆಯ ಈ ಮೊತ್ತದಲ್ಲಿ, ಪ್ರತಿ ಷೇರಿಗೆ ₹ 734ರಂತೆ ಭಾರ್ತಿ ಏರ್‌ಟೆಲ್‌ನ ಶೇಕಡ 1.28ರಷ್ಟು ಷೇರುಗಳನ್ನು ಖರೀದಿಸುವುದು (₹ 5,224 ಕೋಟಿ) ಹಾಗೂ ವಾಣಿಜ್ಯ ಒಪ್ಪಂದಗಳನ್ನು ಜಾರಿಗೊಳಿಸಲು ₹ 2,250 ಕೋಟಿ ವಿನಿಯೋಗಿಸುವುದು ಸೇರಿರಲಿದೆ ಎಂದು ಏರ್‌ಟೆಲ್‌ ಪ್ರಕಟಣೆ ತಿಳಿಸಿದೆ.

‘ಇಂಡಿಯಾ ಡಿಜಿಟಲೈಸೇಷನ್‌ ಫಂಡ್ಸ್‌ನ ಭಾಗವಾಗಿ ಏರ್‌ಟೆಲ್‌ನಲ್ಲಿ ವಾಣಿಜ್ಯ ಮತ್ತು ಈಕ್ವಿಟಿ ಹೂಡಿಕೆ ಮಾಡಲಾಗುತ್ತಿದೆ. ಎರಡೂ ಕಂಪನಿಗಳ ಡಿಜಿಟಲ್‌ ಸ್ಥಿತ್ಯಂತರ ಪಯಣಕ್ಕೆ ನೆರವಾಗಲು ಮತ್ತು ಹೊಸ ವಹಿವಾಟು ಮಾದರಿಗಳಿಗೆ ಬೆಂಬಲ ನೀಡಲು ಇದು ನೆರವಾಗಲಿದೆ’ ಎಂದು ಗೂಗಲ್‌ ಸಿಇಒ ಸುಂದರ್‌ ಪಿಚೈ ಹೇಳಿದ್ದಾರೆ.

‘ಭವಿಷ್ಯದ ಸಿದ್ಧ ನೆಟ್‌ವರ್ಕ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಪಾವತಿ ವ್ಯವಸ್ಥೆಯ ಜೊತೆ ಭಾರತದ ಡಿಜಿಟಲ್ ವ್ಯವಸ್ಥೆಯ ವ್ಯಾಪ್ತಿಯನ್ನು ಹೆಚ್ಚಿಸಲು ಗೂಗಲ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಭಾರ್ತಿ ಏರ್‌ಟೆಲ್‌ನ ಅಧ್ಯಕ್ಷ ಸುನಿಲ್‌ ಭಾರ್ತಿ ಮಿತ್ತಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ADVERTISEMENT

ಈ ಹೂಡಿಕೆಯಿಂದ ಏರ್‌ಟೆಲ್‌ ಕಂಪನಿಗೆ 5ಜಿ ಯೋಜನೆಯ ವಿಸ್ತರಣೆಗೆ ಅನುಕೂಲ ಆಗಲಿದೆ. ಭಾರತದಲ್ಲಿ ಗೂಗಲ್‌ ಕಂಪನಿ ಮಾಡುತ್ತಿರುವ ಎರಡನೇ ಹೂಡಿಕೆ ಇದಾಗಿದೆ. 5ರಿಂದ 7 ವರ್ಷಗಳ ಅವಧಿಯಲ್ಲಿ ಡಿಜಿಟಲೈಸೇಷನ್‌ ಫಂಡ್‌ ಮೂಲಕ ₹ 75 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಕಂಪನಿಯು ಎರಡು ವರ್ಷಗಳ ಹಿಂದೆ ಹೇಳಿತ್ತು. 2020ರ ಜುಲೈನಲ್ಲಿ ಜಿಯೊ ಪ್ಲಾಟ್‌ಫಾರಂನಲ್ಲಿ ಶೇ 7.73ರಷ್ಟು ಷೇರು ಖರೀದಿಗೆ ₹ 33,737 ಕೋಟಿ ಹೂಡಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.