ADVERTISEMENT

ಖಾಸಗಿಯಾಗುವ ಬ್ಯಾಂಕ್‌ ನೌಕರರ ಹಿತಾಸಕ್ತಿ ರಕ್ಷಣೆ: ಸಚಿವೆ ನಿರ್ಮಲಾ ಭರವಸೆ

ಪಿಟಿಐ
Published 16 ಮಾರ್ಚ್ 2021, 15:03 IST
Last Updated 16 ಮಾರ್ಚ್ 2021, 15:03 IST
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌    

ನವದೆಹಲಿ: ಖಾಸಗಿಯವರ ತೆಕ್ಕೆಗೆ ಹೋಗುವ ಸಾಧ್ಯತೆ ಇರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಎಲ್ಲ ನೌಕರರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್‌ ಉದ್ಯಮದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅಸ್ತಿತ್ವ ಮುಂದುವರಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು. ‘ಎಲ್ಲ ಬ್ಯಾಂಕ್‌ಗಳನ್ನೂ ಖಾಸಗಿಯವರಿಗೆ ಮಾರಾಟ ಮಾಡುವುದಿಲ್ಲ. ಹಣಕಾಸು ವಲಯದಲ್ಲಿ ಕೂಡ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇರಲಿವೆ’ ಎಂದು ಸ್ಪಷ್ಟಪಡಿಸಿದರು.

ಫೆಬ್ರುವರಿ 1ರಂದು ಮಂಡಿಸಿದ ಬಜೆಟ್‌ನಲ್ಲಿ ನಿರ್ಮಲಾ ಅವರು, ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಸ್ತಾವ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ ನಿರ್ಮಲಾ ಅವರು, ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾದಷ್ಟು (ಎಸ್‌ಬಿಐ) ಬೃಹತ್‌ ಆಗಿರುವ ಇನ್ನೂ ಹಲವು ಬ್ಯಾಂಕ್‌ಗಳ ಅಗತ್ಯ ದೇಶಕ್ಕಿದೆ ಎಂದರು.

ADVERTISEMENT

ಹಣಕಾಸು ಸಂಸ್ಥೆಗಳಲ್ಲಿ ನಗದು ಲಭ್ಯತೆ ಜಾಸ್ತಿ ಆಗಬೇಕು, ಹೆಚ್ಚು ಜನ ಅವುಗಳಲ್ಲಿ ಹಣ ಹೂಡಿಕೆ ಮಾಡಬೇಕು ಎಂಬುದು ಸರ್ಕಾರದ ಬಯಕೆ ಎಂದರು. ‘ಬ್ಯಾಂಕ್‌ ಇರಲಿ ಅಥವಾ ಇನ್ಯಾವುದೇ ಕಂಪನಿಯ ಖಾಸಗೀಕರಣ ಇರಲಿ, ಅಲ್ಲಿ ಕೆಲಸ ಮಾಡುತ್ತಿರುವವರ ಹಿತಾಸಕ್ತಿಯನ್ನು ರಕ್ಷಿಸಲಾಗುತ್ತದೆ. ಅವರ ವೇತನ, ವೇತನ ಶ್ರೇಣಿ, ಪಿಂಚಣಿ ಇವೆಲ್ಲವುಗಳ ಬಗ್ಗೆ ಕಾಳಜಿ ವಹಿಸಲಾಗುತ್ತದೆ’ ಎಂಬ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.