ADVERTISEMENT

ಕಚ್ಚಾ ಖಾದ್ಯ ತೈಲ: ಶೇ 10ರಷ್ಟು ಸುಂಕ ಕಡಿತ; ಅಡುಗೆ ಎಣ್ಣೆ ದರ ಇಳಿಕೆ?

ಪಿಟಿಐ
Published 31 ಮೇ 2025, 16:21 IST
Last Updated 31 ಮೇ 2025, 16:21 IST
<div class="paragraphs"><p>ಅಡುಗೆ ಎಣ್ಣೆ (ಸಾಂದರ್ಭಿಕ ಚಿತ್ರ)</p></div>

ಅಡುಗೆ ಎಣ್ಣೆ (ಸಾಂದರ್ಭಿಕ ಚಿತ್ರ)

   

ಕೃತಕ ಬುದ್ಧಿಮತ್ತೆ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರವು ಕಚ್ಚಾ ಖಾದ್ಯ ತೈಲದ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನು ಶೇ 10ಕ್ಕೆ ಇಳಿಸಿದ್ದು, ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

ADVERTISEMENT

ಕಳೆದ ವರ್ಷದ ಸೆಪ್ಟೆಂಬರ್‌ 14ರಂದು ಕಚ್ಚಾ ಖಾದ್ಯ ತೈಲಗಳ ಆಮದು ಮೇಲಿದ್ದ ಶೂನ್ಯ ಸುಂಕವ‌ನ್ನು ಶೇ 20ಕ್ಕೆ ಹೆಚ್ಚಿಸಲಾಗಿತ್ತು.

ಕಚ್ಚಾ ತಾಳೆ, ಕಚ್ಚಾ ಸೋಯಾಬೀನ್‌ ಮತ್ತು ಕಚ್ಚಾ ಸೂರ್ಯಕಾಂತಿ ತೈಲದ ಮೇಲೆ  ಸುಂಕ ಇಳಿಕೆಯಾಗಲಿದೆ. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗಿದೆ. ಜೊತೆಗೆ, ದೇಶೀಯ ತೈಲ ಸಂಸ್ಕರಣಾಗಾರರ ಹಿತರಕ್ಷಣೆಗೆ ಸರ್ಕಾರದ ನಿರ್ಧಾರವು ಸಹಕಾರಿಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಭಾರತವು ದೇಶೀಯ ಬೇಡಿಕೆಗೆ ಅನುಗುಣವಾಗಿ ವಾರ್ಷಿಕ ಶೇ 50ರಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. 2023–24ನೇ ಮಾರುಕಟ್ಟೆ ವರ್ಷದಲ್ಲಿ (ನವೆಂಬರ್‌ನಿಂದ ಅಕ್ಟೋಬರ್‌) 159.6 ಲಕ್ಷ ಟನ್‌ ಆಮದು ಮಾಡಿಕೊಂಡಿದೆ. ಇದರ ಒಟ್ಟಾರೆ ಮೌಲ್ಯ ₹1.32 ಲಕ್ಷ ಕೋಟಿ ಆಗಿದೆ. 

ಸರ್ಕಾರದ ನಿರ್ಧಾರದಿಂದಾಗಿ ಮೂಲ ಕಸ್ಟಮ್ಸ್‌ ಸುಂಕ ಹಾಗೂ ಇತರೆ ಶುಲ್ಕ ಸೇರಿ ಈ ಮೂರು ಕಚ್ಚಾ ಖಾದ್ಯ ತೈಲಗಳ ಮೇಲಿನ ಸುಂಕವು ಶೇ 27.5ರಿಂದ ಶೇ 16.5ಕ್ಕೆ ತಗ್ಗಿದೆ.

ಆದರೆ, ಸಂಸ್ಕರಿಸಿದ ಖಾದ್ಯ ತೈಲದ ಮೇಲಿನ ಮೂಲ ಕಸ್ಟಮ್ಸ್ ಸುಂಕವು ಶೇ 32.5ರಷ್ಟಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಮೂಲ ಕಸ್ಟಮ್ಸ್ ಸುಂಕ ಹಾಗೂ ಇತರೆ ಶುಲ್ಕ ಸೇರಿ ಈ ತೈಲದ ಮೇಲಿನ ಒಟ್ಟು ಸುಂಕದ ಪ್ರಮಾಣ ಶೇ 35.5ರಷ್ಟು ಆಗಲಿದೆ.

ಭಾರತವು ಮಲೇಷ್ಯಾ, ಇಂಡೊನೇಷ್ಯಾದಿಂದ ತಾಳೆ ಎಣ್ಣೆ ಮತ್ತು ಬ್ರೆಜಿಲ್‌, ಅರ್ಜೆಂಟೀನಾದಿಂದ ಸೋಯಾಬೀನ್‌ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.

ಸರ್ಕಾರದ ತೀರ್ಮಾನಕ್ಕೆ ಸ್ವಾಗತ

ಸರ್ಕಾರದ ಈ ತೀರ್ಮಾನವನ್ನು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಮತ್ತು ಇಂಡಿಯನ್‌ ವೆಜಿಟೇಬಲ್ ಆಯಿಲ್‌ ಪ್ರೊಡ್ಯೂಜರ್ಸ್‌ ಅಸೋಸಿಯೇಷನ್‌ (ಐವಿಪಿಎ) ಸ್ವಾಗತಿಸಿವೆ.  ‘ಸರ್ಕಾರದ ನಿರ್ಧಾರದಿಂದ ಕಚ್ಚಾ ಮತ್ತು ಸಂಸ್ಕರಿಸಿದ ತೈಲದ ನಡುವಿನ ಸುಂಕದ ವ್ಯತ್ಯಾಸ ಹೆಚ್ಚಳವಾಗಲಿದೆ. ಇದರಿಂದ ಸಂಸ್ಕರಿಸಿದ ತಾಳೆ ಎಣ್ಣೆ ಆಮದು ಪ್ರಮಾಣ ಕಡಿಮೆಯಾಗಲಿದೆ. ಕಚ್ಚಾ ತಾಳೆ ಎಣ್ಣೆಗೆ ಬೇಡಿಕೆ ಹೆಚ್ಚಲಿದೆ. ಇದು ದೇಶೀಯ ಖಾದ್ಯ ತೈಲ ಸಂಸ್ಕರಣಾ ವಲಯದ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ಎಸ್‌ಇಎ ಅಧ್ಯಕ್ಷ ಸಂಜೀವ್ ಅಸ್ತಾನಾ ತಿಳಿಸಿದ್ದಾರೆ. ಪ್ರಸ್ತುತ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಹೆಚ್ಚಿದೆ. ಸದ್ಯ ಬೆಲೆ ಇಳಿಕೆಯಾಗಲಿದ್ದು ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಕಚ್ಚಾ ತಾಳೆ ಎಣ್ಣೆ ದರಕ್ಕೆ ಹೋಲಿಸಿದರೆ ಸಂಸ್ಕರಿಸಿದ ತಾಳೆ ಎಣ್ಣೆ ದರ ತೀರಾ ಕಡಿಮೆ ಇತ್ತು. ಹಾಗಾಗಿ ಇದರ ಆಮದು ಪ್ರಮಾಣ ಹೆಚ್ಚಿತ್ತು ಎಂದು ಹೇಳಿದ್ದಾರೆ.

‘ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲದ ನಡುವಿನ ಆಮದು ಸುಂಕದ ವ್ಯತ್ಯಾಸ ಹೆಚ್ಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಇದನ್ನು ಪುರಸ್ಕರಿಸಿದೆ’ ಎಂದು ಐವಿಪಿಎ ಅಧ್ಯಕ್ಷ ಸುಧಾಕರ ದೇಸಾಯಿ ಹೇಳಿದ್ದಾರೆ. ‘ಸರ್ಕಾರದ ತೀರ್ಮಾನವು ಮೇಕ್‌ ಇನ್‌ ಇಂಡಿಯಾ ಆಶಯಕ್ಕೆ ಬದ್ಧವಾಗಿದೆ. ಸಂಸ್ಕರಿಸಿದ ತೈಲದ ಆಮದಿನಿಂದಾಗಿ ಸಸ್ಯಜನ್ಯ ಎಣ್ಣೆ ವಲಯಕ್ಕೆ ಧಕ್ಕೆಯಾಗುತ್ತಿತ್ತು. ಸದ್ಯ ಇದಕ್ಕೆ ಕಡಿವಾಣ ಬೀಳಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.