ADVERTISEMENT

ಆರ್‌ಬಿಐನ ಹಣ ಬಯಸಿಲ್ಲ: ಕೇಂದ್ರ ಸ್ಪಷ್ಟನೆ

ಪಿಟಿಐ
Published 9 ನವೆಂಬರ್ 2018, 20:15 IST
Last Updated 9 ನವೆಂಬರ್ 2018, 20:15 IST
ಸುಭಾಷ್‌ಚಂದ್ರ ಗರ್ಗ್‌
ಸುಭಾಷ್‌ಚಂದ್ರ ಗರ್ಗ್‌   

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಮೀಸಲು ಸಂಗ್ರಹದಲ್ಲಿನ ಹೆಚ್ಚುವರಿ ಬಂಡವಾಳವನ್ನು ಸರ್ಕಾರಕ್ಕೆ ವರ್ಗಾಯಿಸಬೇಕೆಂದು ಒತ್ತಡ ಹೇರುತ್ತಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.

ಆರ್‌ಬಿಐನ ಸ್ವಾಯತ್ತತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜತೆ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಸ್ಪಷ್ಟನೆ ಹೊರ ಬಿದ್ದಿದೆ.

ಕೇಂದ್ರ ಸರ್ಕಾರವು ಆರ್‌ಬಿಐನ ಮೀಸಲು ಹಣದ ಮೇಲೆ ಕಣ್ಣಿಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ. ಸರ್ಕಾರದ ವಿತ್ತೀಯ ಲೆಕ್ಕಾಚಾರ ಸರಿಯಾದ ಹಾದಿಯಲ್ಲಿ ಸಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಕೇಂದ್ರೀಯ ಬ್ಯಾಂಕ್‌ನ ಮೀಸಲು ಸಂಗ್ರಹದಿಂದ ₹ 1 ಲಕ್ಷ ಕೋಟಿಯಿಂದ ₹ 3.6 ಲಕ್ಷ ಕೋಟಿವರೆಗಿನ ಮೊತ್ತವನ್ನು ಪಡೆಯುವ ಉದ್ದೇಶ ಸರ್ಕಾರಕ್ಕೆ ಇಲ್ಲ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ವಿತ್ತೀಯ ಕೊರತೆ ನಿಯಂತ್ರಣ: 2019ರ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ಶೇ 3.3ರಷ್ಟು ವಿತ್ತೀಯ ಕೊರತೆಗೆ ಸರ್ಕಾರ ಬದ್ಧವಾಗಿದೆ. 2013–14ರಲ್ಲಿ ವಿತ್ತೀಯ ಕೊರತೆಯು ಶೇ 5.1ರಷ್ಟಿತ್ತು. ಇದನ್ನು ಗಮನಾರ್ಹವಾಗಿ ತಗ್ಗಿಸುವಲ್ಲಿ ಸರ್ಕಾರ ಸಫಲವಾಗಿದೆ. ಮಾರುಕಟ್ಟೆಯಿಂದ ₹ 70 ಸಾವಿರ ಕೋಟಿ ಸಾಲ ಎತ್ತುವ ಪ್ರಸ್ತಾವವನ್ನು ಸರ್ಕಾರ ಕೈಬಿಟ್ಟಿದೆ’ ಎಂದು ತಿಳಿಸಿದ್ದಾರೆ.

‘ಆರ್‌ಬಿಐನ ಬಂಡವಾಳ ಅಗತ್ಯ ಮತ್ತು ಅದರ ಬಳಿ ಇರುವ ಬಂಡವಾಳವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸುವುದರ ಕುರಿತು ಮಾತ್ರ ಚರ್ಚೆ ನಡೆಯುತ್ತಿದೆಯಷ್ಟೆ’ ಎಂದು ಹೇಳಿದ್ದಾರೆ.

ಹೊಸ ನೀತಿಗೆ ಸರ್ಕಾರ ಒಲವು
‌ಆರ್‌ಬಿಐನ ಲಾಭದಲ್ಲಿನ ಕೆಲ ಭಾಗವನ್ನು ಡಿವಿಡೆಂಡ್‌ ರೂಪದಲ್ಲಿ ತನಗೆ ವರ್ಗಾಯಿಸಬೇಕು ಎಂದು ಸರ್ಕಾರ ಪ್ರತಿಪಾದಿಸುತ್ತಿದೆ. ತನ್ನ ಹಣಕಾಸು ಪರಿಸ್ಥಿತಿಯನ್ನು (ಬ್ಯಾಲನ್ಸ್‌ಶೀಟ್‌) ಸದೃಢವಾಗಿ ಇರಿಸಿಕೊಳ್ಳಲು ಲಾಭದ ಕೆಲ ಭಾಗವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಳ್ಳಲು ಆರ್‌ಬಿಐ ಉದ್ದೇಶಿಸಿದೆ.ಲಾಭಾಂಶ ವಿತರಣೆ ಮತ್ತು ಬಂಡವಾಳ ಮೀಸಲಿಗೆ ಸಂಬಂಧಿಸಿದಂತೆ ಆರ್‌ಬಿಐ ಹೊಸ ನೀತಿ ಅಳವಡಿಸಿಕೊಳ್ಳಬೇಕು ಎಂಬುದು ಕೇಂದ್ರದ ನಿಲುವಾಗಿದೆ.

ಸದ್ಯದ ನಿಯಮಗಳ ಪ್ರಕಾರ, ಆರ್‌ಬಿಐನ ಬಂಡವಾಳ ಅಗತ್ಯ ಈಡೇರಿಕೆಗೆ ಲಾಭದಲ್ಲಿನ ಶೇ 27ರಷ್ಟನ್ನು ಪ್ರತ್ಯೇಕವಾಗಿ ತೆಗೆದು ಇರಿಸಬೇಕಾಗುತ್ತದೆ. ವಿಶ್ವದ ಬಹುತೇಕ ಕೇಂದ್ರೀಯ ಬ್ಯಾಂಕ್‌ಗಳಲ್ಲಿ ಇದು ಶೇ 14ರಷ್ಟಿದೆ. ಒಂದು ವೇಳೆ ಆರ್‌ಬಿಐ ಕೂಡ ಇದೇ ನಿಯಮ ಅನುಸರಿಸಿದರೆ ಅದರ ಬಳಿ ಹೆಚ್ಚುವರಿಯಾಗಿ ₹ 3.6 ಲಕ್ಷ ಕೋಟಿ ಬಂಡವಾಳ ಇರಲಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಬೇಕು ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.