ನವದೆಹಲಿ: ಪ್ರಮಾಣಿತ ಸಾವಯವ ಉತ್ಪನ್ನಗಳ ರಫ್ತಿಗೆ ನ್ಯಾಷನಲ್ ಪ್ರೋಗ್ರಾಂ ಫಾರ್ ಆರ್ಗಾನಿಕ್ ಪ್ರೊಡಕ್ಷನ್‌ನಿಂದ (ಎನ್‌ಪಿಒಪಿ) ವಹಿವಾಟು ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರವು ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಸಾವಯವ ಉತ್ಪನ್ನ ಎಂದು ಪ್ರಮಾಣ ಪತ್ರ ಪಡೆದ ಉತ್ಪನ್ನಗಳಿಗೆ ಮಾತ್ರ ರಫ್ತು ಮಾಡಲು ಅನುಮತಿ ನೀಡಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.
2030ರ ವೇಳೆಗೆ ದೇಶವು ₹17,146 ಕೋಟಿ (2 ಬಿಲಿಯನ್ ಡಾಲರ್) ಮೌಲ್ವದ ಸಾವಯವ ಆಹಾರ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ.
ಎನ್‌ಪಿಒಪಿ ಮಾನದಂಡದ ಪ್ರಕಾರ ಉತ್ಪಾದನೆ, ಸಂಸ್ಕರಣೆ, ಪ್ಯಾಕ್ ಮಾಡಿದ ಮತ್ತು ಲೇಬಲ್ ಎಂದು ಪ್ರಮಾಣೀಕರಿಸಿದ ಸರಕುಗಳನ್ನು ರಫ್ತು ಮಾಡಬಹುದಾಗಿದೆ. ಈ ಆದೇಶವು ಜನವರಿ 5ರಿಂದ ಅನ್ವಯ ಆಗಲಿದ್ದು, 180 ದಿನದವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದೆ.
ಕೇಂದ್ರ ವಾಣಿಜ್ಯ ಸಚಿವಾಲಯದ ಕೃಷಿ ಮತ್ತು ಆಹಾರ ಸಂಸ್ಕರಣಾ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಪಿಇಡಿಎ) ರೈತ ಸ್ನೇಹಿ ಮತ್ತು ದೇಶದ ಸಾವಯವ ಆಹಾರ ಉತ್ಪನ್ನಗಳ ರಫ್ತಿಗೆ ನೆರವು ನೀಡಲು ಎನ್‌ಪಿಒಪಿ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ನವೆಂಬರ್ ಅವಧಿಯಲ್ಲಿ ಈ ಉತ್ಪನ್ನಗಳ ರಫ್ತು ಮೌಲ್ಯ ₹3,909 ಕೋಟಿ ಇತ್ತು. 2023–24ರ ಪೂರ್ಣ ಹಣಕಾಸು ವರ್ಷದಲ್ಲಿ ₹4,244 ಕೋಟಿ ಇತ್ತು.
ಅಮೆರಿಕ, ಐರೋಪ್ಯ ಒಕ್ಕೂಟ, ಕೆನಡಾ, ಬ್ರಿಟನ್, ಸ್ವಿಟ್ಜರ್‌ಲೆಂಡ್, ಆಸ್ಟ್ರೇಲಿಯಾ, ಪಶ್ಚಿಮ ಏಷ್ಯಾ ಮತ್ತು ಏಷ್ಯನ್ ದೇಶಗಳಿಗೆ ಈ ಉತ್ಪನ್ನಗಳು ರಫ್ತಾಗುತ್ತದೆ. ಧಾನ್ಯಗಳು, ಸಂಸ್ಕರಿಸಿದ ಆಹಾರ, ಚಹಾ, ಮಸಾಲೆ ಪದಾರ್ಥಗಳು, ಸಕ್ಕರೆ, ಔಷಧೀಯ ಸಸ್ಯದ ಉತ್ಪನ್ನಗಳು, ಕಾಫಿ, ಎಣ್ಣೆ ಕಾಳುಗಳು ಸೇರಿ ಇತರೆ ಉತ್ಪನ್ನಗಳು ಪ್ರಮುಖವಾಗಿ ರಫ್ತಾಗುವ ವಸ್ತುಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.