ನವದೆಹಲಿ: ‘ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ 290 ಲಕ್ಷ ಟನ್ ಗೋಧಿ ಖರೀದಿಸಲಾಗಿದೆ. ಈ ಬಾರಿ ಖರೀದಿ ಪ್ರಮಾಣವು 320 ಲಕ್ಷ ಟನ್‌ನಿಂದ 325 ಲಕ್ಷ ಟನ್‌ಗೆ ಮುಟ್ಟುವ ನಿರೀಕ್ಷೆಯಿದೆ’ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು 2025–26ನೇ ಮಾರುಕಟ್ಟೆ ವರ್ಷದಲ್ಲಿ (ಏಪ್ರಿಲ್–ಮಾರ್ಚ್) 312 ಲಕ್ಷ ಟನ್ ಗೋಧಿ ಖರೀದಿಗೆ ಗುರಿ ನಿಗದಿಪಡಿಸಿದೆ. 2024–25ನೇ ಮಾರುಕಟ್ಟೆ ವರ್ಷದಲ್ಲಿ 265 ಲಕ್ಷ ಟನ್ ಗೋಧಿ ಖರೀದಿಸಲಾಗಿದೆ ಎಂದರು.
2024–25ನೇ ಬೆಳೆ ವರ್ಷದಲ್ಲಿ (ಜುಲೈ–ಜೂನ್) 1,153 ಲಕ್ಷ ಟನ್ ಗೋಧಿ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಉತ್ಪಾದನೆಯಾಗುವುದರಿಂದ ಖರೀದಿ ಪ್ರಮಾಣದಲ್ಲೂ ಏರಿಕೆಯಾಗಲಿದೆ ಎಂದು ಹೇಳಿದರು.
ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದಾಸ್ತಾನು ಸ್ಥಿತಿಯನ್ನು ಅವಲೋಕಿಸಿ ಗೋಧಿ ರಫ್ತಿಗೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಭಾರತೀಯ ಆಹಾರ ನಿಗಮ ಮತ್ತು ಆಯಾ ರಾಜ್ಯ ಸರ್ಕಾರದ ಏಜೆನ್ಸಿಗಳಿಂದ ಗೋಧಿ ಖರೀದಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.