ADVERTISEMENT

ವಂಚನೆಯ ಉದ್ದೇಶ ಫ್ಲ್ಯಾಶ್‌ಸೇಲ್‌ಗೆ ನಿಷೇಧ: ಕೇಂದ್ರದ ಪ್ರಸ್ತಾವ

ಪಿಟಿಐ
Published 21 ಜೂನ್ 2021, 16:26 IST
Last Updated 21 ಜೂನ್ 2021, 16:26 IST

ನವದೆಹಲಿ: ಇ–ಕಾಮರ್ಸ್ ತಾಣಗಳಲ್ಲಿ ಗ್ರಾಹಕರಿಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ಉತ್ಪನ್ನ ಮಾರಾಟ ಮಾಡುವುದು, ಫ್ಲ್ಯಾಶ್‌ಸೇಲ್‌ ಹೆಸರಿನಲ್ಲಿ ವಂಚನೆ ಮಾಡುವುದನ್ನು ತಡೆಯುವ ಉದ್ದೇಶದಿಂದ ‘ಗ್ರಾಹಕರ ಸಂರಕ್ಷಣೆ ನಿಯಮ – 2020’ಕ್ಕೆ ಕೆಲವು ಬದಲಾವಣೆಗಳನ್ನು ತರುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಈ ಬಗ್ಗೆ ಅದು ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿದೆ.

ಪ್ರಸ್ತಾವಿತ ಬದಲಾವಣೆಗಳ ಬಗ್ಗೆ ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ಹದಿನೈದು ದಿನಗಳ ಒಳಗೆ js-ca@nic.in ವಿಳಾಸಕ್ಕೆ ಇ–ಮೇಲ್‌ ಮೂಲಕ ತಿಳಿಸಬಹುದು ಎಂದು ಗ್ರಾಹಕರ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ ತಿಳಿಸಿದ್ದಾರೆ.

ಅತಿಯಾದ ಪ್ರಮಾಣದಲ್ಲಿ ರಿಯಾಯಿತಿಗಳನ್ನು ಘೋಷಿಸಿ, ಇನ್ನೊಂದು ಉತ್ಪನ್ನದ ಮಾರುಕಟ್ಟೆಯನ್ನು ಹಾಳುವ ಮಾಡುವ ಉದ್ದೇಶದ, ಕೆಲವು ಉದ್ದಿಮೆಗಳಿಗೆ ಮಾತ್ರ ನೆರವಾಗುವ ರೀತಿಯ ಇ–ವಾಣಿಜ್ಯ ವಹಿವಾಟುಗಳನ್ನು ನಿಷೇಧಿಸುವ ಪ್ರಸ್ತಾವ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಇ–ವಾಣಿಜ್ಯ ತಾಣಗಳು ಉತ್ಪನ್ನವೊಂದರ ಬೆಲೆಯನ್ನು ಗಣನೀಯವಾಗಿ ತಗ್ಗಿಸಿ, ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಉತ್ಪನ್ನವನ್ನು ಮಾರಾಟ ಮಾಡುವುದನ್ನು ಪ್ರಸ್ತಾವಿತ ಬದಲಾವಣೆಯಲ್ಲಿ ‘ಫ್ಲ್ಯಾಶ್ ಸೇಲ್’ ಎಂದು ವ್ಯಾಖ್ಯಾನಿಸಲಾಗಿದೆ. ಇಂತಹ ಮಾರಾಟಗಳನ್ನು ನಿರ್ಬಂಧಿಸುವ ಉದ್ದೇಶವು ಪ್ರಸ್ತಾವಿತ ನಿಯಮಗಳಿಗೆ ಇದೆ.

ಉತ್ಪನ್ನಗಳ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ನೀಡಿ, ಆ ಮೂಲಕ ಆ ಉತ್ಪನ್ನವನ್ನು ಗ್ರಾಹಕರಿಗೆ ಮಾರಾಟ ಮಾಡುವುದನ್ನು ಕೂಡ ನಿರ್ಬಂಧಿಸುವ ಪ್ರಸ್ತಾವ ಇದರಲ್ಲಿ ಇದೆ. ಮಾರುಕಟ್ಟೆಯಲ್ಲಿ ಪ್ರಭಾವಿ ಸ್ಥಾನ ಹೊಂದಿರುವ ಇ–ಕಾಮರ್ಸ್ ಕಂಪನಿಗಳಿಗೆ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.