ADVERTISEMENT

ಮೊಬೈಲ್‌ ಪತ್ತೆಗೆ ಸಿಇಐಆರ್‌; 17ರಿಂದ ದೇಶವ್ಯಾಪಿ ಬಳಕೆಗೆ!

ಪಿಟಿಐ
Published 14 ಮೇ 2023, 13:20 IST
Last Updated 14 ಮೇ 2023, 13:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಳೆದುಹೋದ ಅಥವಾ ಕಳುವಾದ ಮೊಬೈಲ್ ಫೋನ್‌ಗಳನ್ನು ‍ಬ್ಲಾಕ್‌ ಮಾಡುವ ಮತ್ತು ಪತ್ತೆ ಮಾಡುವ ವ್ಯವಸ್ಥೆಯು ಇದೇ 17ರಿಂದ ದೇಶದಾದ್ಯಂತ ಬಳಕೆಗೆ ಲಭ್ಯವಾಗಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದುಹೋದ ಫೋನ್‌ ಪತ್ತೆ ಮಾಡಲು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ಅಭಿವೃದ್ಧಿಪಡಿಸಿರುವ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್‌) ಜಾಲತಾಣವು ಸದ್ಯ ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಮತ್ತು ಈಶಾನ್ಯ ಭಾಗಗಳಲ್ಲಿ ಪ್ರಾಯೋಗಿಕವಾಗಿ ಬಳಕೆಯಲ್ಲಿದೆ ಎಂದು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಕೇಳಿದಾಗ, ‘ದೇಶದಾದ್ಯಂತ ಬಳಕೆ ಮಾಡಲು ತಂತ್ರಜ್ಞಾನವು ಸಿದ್ಧವಾಗಿದೆ’ ಎಂದಷ್ಟೇ ಸಿ-ಡಾಟ್‌ನ ಯೋಜನಾ ಮಂಡಳಿ ಅಧ್ಯಕ್ಷ ಮತ್ತು ಸಿಇಒ ರಾಜ್‌ಕುಮಾರ್‌ ಉಪಾಧ್ಯಾಯ ಹೇಳಿದ್ದಾರೆ. ಆದರೆ, ದೇಶದಾದ್ಯಂತ ಇದನ್ನು ಜಾರಿಗೊಳಿಸುವ ದಿನಾಂಕವನ್ನು ಅವರು ಖಚಿತಪಡಿಸಿಲ್ಲ.

ADVERTISEMENT

ಕರ್ನಾಟಕ ಪೊಲೀಸರು ಕಳೆದುಹೋಗಿದ್ದ 2,500 ಮೊಬೈಲ್‌ ಫೋನ್‌ಗಳನ್ನು ಸಿಇಐಆರ್‌ ವ್ಯವಸ್ಥೆಯ ಬಳಸಿ ಈಚೆಗಷ್ಟೇ ಪತ್ತೆ ಮಾಡಿ ಸಂಬಂಧಪಟ್ಟವರಿಗೆ ನೀಡಿದ್ದಾರೆ. ಆ್ಯಪಲ್‌ ಫೋನ್‌ ಕಳುವಾದರೆ ಅದನ್ನು ಪತ್ತೆ ಮಾಡಲು ಆ್ಯಪಲ್‌ ಐಡಿ ನೆರವಾಗುತ್ತದೆ. ಆದರೆ, ಹೆಚ್ಚಿನ ಸಮಸ್ಯೆ ಇರುವುದು ಆಂಡ್ರಾಯ್ಡ್ ಫೋನ್‌ಗಳಲ್ಲಿ.

ಫೋನ್‌ಗಳ ಕಳ್ಳಸಾಗಣೆಯನ್ನೂ ಪತ್ತೆ ಮಾಡುವ ವ್ಯವಸ್ಥೆಯು ಇದರಲ್ಲಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವರಮಾನ ನಷ್ಟ ಆಗುವುದು ತಪ್ಪಲಿದೆ ಎಂದು ಉಪಾಧ್ಯಾಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.