ADVERTISEMENT

ರಿಟೇಲ್‌ ವ್ಯಾಪಾರ, ಇ–ವಾಣಿಜ್ಯಕ್ಕೆ ನೀತಿ

ಪಿಟಿಐ
Published 6 ಮಾರ್ಚ್ 2023, 16:33 IST
Last Updated 6 ಮಾರ್ಚ್ 2023, 16:33 IST
   

ನವದೆಹಲಿ: ರಿಟೇಲ್‌ ವ್ಯಾಪಾರ ಹಾಗೂ ಇ–ವಾಣಿಜ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯೊಂದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಜಂಟಿ ಕಾರ್ಯದರ್ಶಿ ಸಂಜೀವ್ ಹೇಳಿದ್ದಾರೆ.

ಈ ಎರಡು ವಲಯಗಳ ಬೆಳವಣಿಗೆಗೆ ನೆರವಾಗುವುದು ನೀತಿಯನ್ನು ಜಾರಿಗೆ ತರುವುದರ ಹಿಂದಿನ ಉದ್ದೇಶ.

ರಿಟೇಲ್‌ ವ್ಯಾಪಾರಕ್ಕೆ ಸಂಬಂಧಿಸಿದ ನೀತಿಯು ಈ ವರ್ಗದ ವ್ಯಾಪಾರಿಗಳಿಗೆ ಸಹಕಾರಿಯಾಗುವ ವಾತಾವರಣ, ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಸುಲಭ ಸಾಲ ಸೌಲಭ್ಯವನ್ನು ಒದಗಿಸಲಿದೆ ಎಂದು ಅವರು ಹೇಳಿದ್ದಾರೆ. ‘ಇ–ವಾಣಿಜ್ಯ ವೇದಿಕೆಗಳು ಹಾಗೂ ರಿಟೇಲ್‌ ವ್ಯಾಪಾರಿಗಳ ನಡುವೆ ಸಹಕಾರ ಇರಬೇಕು ಎಂಬುದು ನಮ್ಮ ಬಯಕೆ’ ಎಂದು ಸಂಜೀವ್ ಅವರು ಫಿಕ್ಕಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಆದರೆ ಹೊಸ ನೀತಿಯ ಜಾರಿಗೆ ಅವರು ಕಾಲಮಿತಿ ಹೇಳಿಲ್ಲ.

ADVERTISEMENT

ಸಣ್ಣ ವ್ಯಾಪಾರಿಗಳಿಗೆ ಅನ್ವಯವಾಗುವ ವಿಮಾ ಯೋಜನೆಯನ್ನು ರೂಪಿಸುವ ಪ್ರಕ್ರಿಯೆ ಇಲಾಖೆಯಲ್ಲಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಅಪಘಾತದ ಸಂದರ್ಭಗಳಲ್ಲಿ ಹಣಕಾಸಿನ ರಕ್ಷಣೆ ನೀಡುವ ಈ ವಿಮೆಯಿಂದ ದೇಶದ ಸಣ್ಣ ವ್ಯಾಪಾರಿಗಳಿಗೆ ಸಹಾಯ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದೇಶದ ರಿಟೇಲ್ ಮಾರುಕಟ್ಟೆಯು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮಾರುಕಟ್ಟೆಗಳಲ್ಲಿ ಒಂದು. ಇದು 2032ಕ್ಕೆ ಮೊದಲು ₹ 163 ಲಕ್ಷ ಕೋಟಿಗೆ ತಲುಪುವ ಅಂದಾಜು ಇದೆ’ ಎಂದು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ರಿಲಯನ್ಸ್ ರಿಟೇಲ್‌ ನಿರ್ದೇಶಕ ಸುಬ್ರಮಣಿಯಂ ವಿ. ಅಂದಾಜಿಸಿದ್ದಾರೆ.

ಹೊಸ ನೀತಿಯ ಅಡಿಯಲ್ಲಿ ಕೇಂದ್ರ ಸರ್ಕಾರವು, ಅಂಗಡಿಗಳ ಆಧುನೀಕರಣಕ್ಕೆ ಬೆಂಬಲ ಒದಗಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.