ADVERTISEMENT

ಗ್ರಾಸರಿ ಫ್ಯಾಕ್ಟರಿ: ವಹಿವಾಟು ವೃದ್ಧಿ

​ಕೇಶವ ಜಿ.ಝಿಂಗಾಡೆ
Published 1 ಜೂನ್ 2020, 2:02 IST
Last Updated 1 ಜೂನ್ 2020, 2:02 IST
ಸಹ ಸ್ಥಾಪಕರಾದ ಕಾರ್ತಿಕ್‌ ಶೆಟ್ಟಿ ಮತ್ತು ಅರ್ಜುನ್‌. ಬಿ ಶೆಟ್ಟಿ
ಸಹ ಸ್ಥಾಪಕರಾದ ಕಾರ್ತಿಕ್‌ ಶೆಟ್ಟಿ ಮತ್ತು ಅರ್ಜುನ್‌. ಬಿ ಶೆಟ್ಟಿ   

ಬೆಂಗಳೂರು: ಗ್ರಾಹಕರ ಮನೆ ಬಾಗಿಲಿಗೆ ದಿನಸಿ, ತರಕಾರಿ, ಹಣ್ಣು ಪೂರೈಸುವ ಗ್ರಾಸರಿ ಫ್ಯಾಕ್ಟರಿ, ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಬೆಂಗಳೂರಿನ ಗ್ರಾಹಕರಿಗೆ ವಿಳಂಬ ಇಲ್ಲದೆ ಸರಕು ಪೂರೈಸಿ ವಹಿವಾಟು ಹೆಚ್ಚಿಸಿಕೊಂಡಿದೆ.

ಕೆಲ ವರ್ಷಗಳ ಹಿಂದೆ ಡೇಲಿ ಮಾರ್ಟ್‌ ಹೆಸರಿನ ಸೂಪರ್‌ ಮಾರ್ಕೆಟ್‌ ನಿರ್ವಹಿಸುತ್ತಿದ್ದ ಬಿ. ಕಾರ್ತಿಕ್‌ ಶೆಟ್ಟಿ ಮತ್ತು ಅರ್ಜುನ್‌. ಬಿ ಶೆಟ್ಟಿ ಒಡೆತನದ ಗ್ರಾಸರಿ ಫ್ಯಾಕ್ಟರಿಯು, ಗ್ರಾಹಕರಿಗೆ ದಿಗ್ಬಂಧನದ ಬಿಸಿ ತಾಗದಂತೆ ಸಮರ್ಪಕವಾಗಿ ಸರಕುಗಳನ್ನು ಪೂರೈಸಿದೆ.

‘ದಿಗ್ಬಂಧನದ ಕಾರಣಕ್ಕೆ ಸರಕುಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಇ–ಕಾಮರ್ಸ್‌ನ ಇತರ ಕಂಪನಿಗಳು ಗ್ರಾಹಕರಿಗೆ ಸಕಾಲದಲ್ಲಿ ಸರಕು ಪೂರೈಸಲು ಸಾಧ್ಯವಾಗಿರಲಿಲ್ಲ. ಸ್ಥಳೀಯವಾಗಿಯೇ ಸರಕು ಸಂಗ್ರಹಿಸಿ ವಹಿವಾಟು ನಡೆಸುವ ನಮಗೆ ಅಂತಹ ಸಮಸ್ಯೆ ಎದುರಾಗಿಲ್ಲ. ಎರಡು ತಿಂಗಳಲ್ಲಿ ವಹಿವಾಟು ಮೂರು ಪಟ್ಟು ಹೆಚ್ಚಳಗೊಂಡಿದೆ’ ಎಂದು ಸಹ ಸ್ಥಾಪಕ ಬಿ. ಕಾರ್ತಿಕ್‌ ಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಇತರ ವಹಿವಾಟುದಾರರಿಗೆ ಹೋಲಿಸಿದರೆ ಶೇ 30ರಷ್ಟು ಕಡಿಮೆ ಬೆಲೆ, ಕಡಿಮೆ ಅವಧಿಯಲ್ಲಿ ತಾಜಾ ಸರಕಿನ ಪೂರೈಕೆ, ಪಾರದರ್ಶಕ ವಹಿವಾಟು ಮತ್ತು ಸ್ವಂತ ಬ್ರ್ಯಾಂಡ್‌ನ ಉತ್ಪನ್ನಗಳು ನಮ್ಮ ವಹಿವಾಟಿನ ಯಶಸ್ಸಿನ ಸೂತ್ರಗಳಾಗಿವೆ. ದಿನಸಿ ಉತ್ಪನ್ನಗಳ ಪೂರೈಕೆಯಲ್ಲಿ ತಾಜಾತನ ಮುಖ್ಯವಾಗುತ್ತದೆ. ನಮ್ಮಲ್ಲಿ ಉತ್ಪನ್ನ ಸಂಗ್ರಹಿಸಿದ 7 ದಿನಗಳಲ್ಲಿ ಗ್ರಾಹಕರಿಗೆ ಪೂರೈಕೆಯಾಗುತ್ತದೆ.

ಅಂತರ್ಜಾಲ ತಾಣ (https://groceryfactory.in), ಮೊಬೈಲ್‌ ಆ್ಯಪ್‌ ಮತ್ತು ಫೋನ್‌ ಕರೆ ಮೂಲಕವೂ ಗ್ರಾಹಕರು ತಮ್ಮ ಬೇಡಿಕೆ ಸಲ್ಲಿಸಬಹುದು. 24 ಗಂಟೆ ಒಳಗೆ ಸರಕುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಪೂರೈಸಲಾಗುವುದು. ಪೂರೈಕೆಯ ಎಲ್ಲ ಹಂತಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ.

‘ಮನೆ, ಮನೆಗೆ ಸರಕು ಪೂರೈಸುವವರು ಮೊದಲಿನಿಂದಲೂ ಸ್ವಚ್ಛತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದರು. ಲಾಕ್‌ಡೌನ್‌ ಸಂದರ್ಭದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆ ಹೆಚ್ಚಿಸಲಾಗಿದೆ. ಈ ವರ್ಷ ಬೆಂಗಳೂರು ಸಮೀಪದ ಜಿಲ್ಲಾ ಕೇಂದ್ರಗಳಲ್ಲಿ ವಹಿವಾಟು ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದ್ದಾರೆ.

ಜಿಎಫ್‌ಪಿ ಯೋಜನೆ: ವಹಿವಾಟು ವಿಸ್ತರಿಸಲು ಮತ್ತು ಗ್ರಾಹಕರಿಗೆ ಪ್ರಯೋಜನ ಕಲ್ಪಿಸಲು ಗ್ರಾಸರಿ ಫ್ಯಾಕ್ಟರಿ ಪಾರ್ಟನರ್ (ಜಿಎಫ್‌ಪಿ) ಹೆಸರಿನ ಯೋಜನೆ ಪರಿಚಯಿಸಿದೆ. ಕಂಪನಿಯ ಗ್ರಾಹಕರು ತಮ್ಮ ಸ್ನೇಹಿತರು, ಸಂಬಂಧಿಕರನ್ನು ಗ್ರಾಹಕರನ್ನಾಗಿ ಮಾಡಿ ನಿರಂತರವಾಗಿ ಪ್ರಯೋಜನ ಪಡೆಯುವ ಸೌಲಭ್ಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.