ಜಿಎಸ್‌ಟಿ
ನವದೆಹಲಿ: ಜೂನ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.84 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಇದು ಹಿಂದಿನ ವರ್ಷದ ಜೂನ್ ತಿಂಗಳಲ್ಲಿ ಆಗಿದ್ದ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಶೇಕಡ 6.2ರಷ್ಟು ಹೆಚ್ಚು.
ಹೀಗಿದ್ದರೂ, ಏಪ್ರಿಲ್ ಮತ್ತು ಮೇ ತಿಂಗಳ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಜೂನ್ ತಿಂಗಳ ವರಮಾನ ಸಂಗ್ರಹ ಕಡಿಮೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಎಸ್‌ಟಿ ಮೂಲಕ ಕ್ರಮವಾಗಿ ₹2.37 ಲಕ್ಷ ಕೋಟಿ ಹಾಗೂ ₹2.01 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.
ಜೂನ್ ತಿಂಗಳಲ್ಲಿ ದೇಶಿ ವಹಿವಾಟುಗಳ ಮೂಲಕ ಸಂಗ್ರಹವಾದ ಜಿಎಸ್‌ಟಿ ವರಮಾನ ₹1.38 ಲಕ್ಷ ಕೋಟಿ ಆಗಿದೆ. ಆಮದು ವಹಿವಾಟು ಮೂಲಕ ಸಂಗ್ರಹವಾದ ಜಿಎಸ್‌ಟಿ ವರಮಾನವು ₹45,690 ಕೋಟಿ.
ಜೂನ್‌ನಲ್ಲಿ ಜಿಎಸ್‌ಟಿ ಮರುಪಾವತಿಗಳ ಮೊತ್ತದಲ್ಲಿ ಶೇ 28.4ರಷ್ಟು ಹೆಚ್ಚಳ ಆಗಿದ್ದು, ₹25,491 ಕೋಟಿಗೆ ತಲುಪಿದೆ. ನಿವ್ವಳ ಜಿಎಸ್‌ಟಿ ಸಂಗ್ರಹವು ₹1.59 ಲಕ್ಷ ಕೋಟಿ ಆಗಿದೆ.
ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ಜಿಎಸ್‌ಟಿ ವರಮಾನ ಸಂಗ್ರಹದಲ್ಲಿ ಶೇ 4ರಿಂದ ಶೇ 8ರವರೆಗೆ ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್‌ನಲ್ಲಿ ವರಮಾನ ಸಂಗ್ರಹ ಪ್ರಮಾಣದಲ್ಲಿ ಶೇ 1ರಿಂದ ಶೇ 4ರವರೆಗೆ ಇಳಿಕೆ ಆಗಿದೆ.
ಸತತ ಎರಡು ತಿಂಗಳುಗಳಲ್ಲಿ ಜಿಎಸ್‌ಟಿ ವರಮಾನ ಸಂಗ್ರಹವು ₹2 ಲಕ್ಷ ಕೋಟಿಗಿಂತ ಹೆಚ್ಚಿನ ಮಟ್ಟದಲ್ಲಿ ಇತ್ತು. ಈಗ ಅದು ಜೂನ್ ತಿಂಗಳಲ್ಲಿ ₹1.84 ಲಕ್ಷ ಕೋಟಿ ಆಗಿರುವುದು ತುಸು ಕಡಿಮೆ ಅನಿಸುತ್ತದೆ ಎಂದು ತೆರಿಗೆ ತಜ್ಞ ವಿವೇಕ್ ಜಲನ್ ಹೇಳಿದ್ದಾರೆ.
‘ವಹಿವಾಟು ಸುಲಲಿತಗೊಳಿಸಲು ಗಮನ’
ಜಿಎಸ್‌ಟಿ ವ್ಯವಸ್ಥೆಯ ಗಮನವು ಇನ್ನು ಮುಂದೆ ಉದ್ಯಮ ವಹಿವಾಟು ಸುಲಲಿತಗೊಳಿಸುವತ್ತ ಹಾಗೂ ತೆರಿಗೆ ಪಾವತಿಯನ್ನು ಬಲಪಡಿಸುವತ್ತ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದು ಎಂಟು ವರ್ಷಗಳು ತುಂಬಿರುವ ಹೊತ್ತಿನಲ್ಲಿ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಕೂಡ ಮುಂದಿನ ದಿನಗಳಲ್ಲಿ ಆದ್ಯತೆ ಪಡೆಯಲಿದೆ ಎಂದು ಅದು ಹೇಳಿದೆ. 2017ರ ಜುಲೈ 1ರಿಂದ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.