ADVERTISEMENT

ಬ್ಯಾಂಕ್‌ಗಳ ವಸೂಲಾಗದ ಸಾಲ ಹೆಚ್ಚಳ ಸಾಧ್ಯತೆ

ಆರ್‌ಬಿಐನ ಹಣಕಾಸು ಸ್ಥಿರತೆ ವರದಿಯಲ್ಲಿ ಮಾಹಿತಿ

ಪಿಟಿಐ
Published 30 ಡಿಸೆಂಬರ್ 2021, 2:07 IST
Last Updated 30 ಡಿಸೆಂಬರ್ 2021, 2:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಒಂದೊಮ್ಮೆ ಕೊರೊನಾದ ಹೊಸ ತಳಿ ಓಮೈಕ್ರಾನ್‌, ದೇಶದ ಆರ್ಥಿಕತೆಯ ಮೇಲೆ ತೀವ್ರ ತರದ ಪರಿಣಾಮ ಉಂಟುಮಾಡಿದಲ್ಲಿ ಬ್ಯಾಂಕ್‌ಗಳ ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು 2022ರ ಸೆಪ್ಟೆಂಬರ್‌ ವೇಳೆಗೆ ಶೇ 9.5ರವರೆಗೂ ಏರಿಕೆ ಆಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಎಚ್ಚರಿಕೆ ನೀಡಿದೆ.

ಬ್ಯಾಂಕ್‌ಗಳ ಸರಾಸರಿ ಎನ್‌ಪಿಎ 2021ರ ಸೆಪ್ಟೆಂಬರ್‌ ವೇಳೆಗೆ ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 6.9ಕ್ಕೆ ಇಳಿಕೆ ಆಗಿತ್ತು. ಆದರೆ, ರಿಟೇಲ್‌ ಸಾಲ ವಿಭಾಗದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ವರ್ಷ ಸರಾಸರಿ ಎನ್‌ಪಿಎ ಶೇ 8.1 ರಿಂದ ಶೇ 9.5ರವರೆಗೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಬುಧವಾರ ಬಿಡುಗಡೆ ಮಾಡಿರುವ ಆರ್ಥಿಕ ಸ್ಥಿರತೆಯ ವರದಿಯಲ್ಲಿ ಆರ್‌ಬಿಐ ತಿಳಿಸಿದೆ. ಸಾಲ ವಿತರಣೆಯು ಮಾರ್ಚ್‌ನಲ್ಲಿ ಇದ್ದ ‌ಶೇ 5.2 ಕ್ಕೆ ಹೋಲಿಸಿದರೆ ಏಪ್ರಿಲ್‌ನಿಂದ ‌ಡಿಸೆಂಬರ್‌ನ ಮೊದಲ ವಾರದ ಅವಧಿಯಲ್ಲಿ ಶೇ 7.1 ಕ್ಕೆ ಏರಿಕೆ ಆಗಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸರಾಸರಿ ಎನ್‌ಪಿಎ ಸದ್ಯ ಶೇ 8.8ರಷ್ಟು ಇದ್ದು, ಇದು 2022ರ ಸೆಪ್ಟೆಂಬರ್ ವೇಳಗೆ ಶೇ 10.5ರ ಮಟ್ಟಕ್ಕೆ ಏರಿಕೆ ಆಗುವ ಸಂಭವ ಇದೆ. ಖಾಸಗಿ ವಲಯದ ಬ್ಯಾಂಕ್‌ಗಳ ಎನ್‌ಪಿಎ ಶೇ 4.6 ರಿಂದ ಶೇ 5.2ಕ್ಕೆ ಹಾಗೂ ವಿದೇಶಿ ಬ್ಯಾಂಕ್‌ಗಳ ಎನ್‌ಪಿಎ ಶೇ 3.2 ರಿಂದ ಶೇ 3.9ಕ್ಕೆ ಏರಿಕೆ ಆಗುವ ಅಂದಾಜು ಮಾಡಲಾಗಿದೆ ಎಂದು ಹೇಳಿದೆ.

ADVERTISEMENT

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವು ಮಾರ್ಚ್‌ನಲ್ಲಿ ಶೇ 67.6ರಷ್ಟು ಇದ್ದಿದ್ದು ಸೆಪ್ಟೆಂಬರ್‌ನಲ್ಲಿ ಶೇ 68.1ಕ್ಕೆ ಏರಿಕೆ ಆಗಿದೆ.

ಒತ್ತಡದ ವಾತಾವರಣ ನಿರ್ಮಾಣ ಆಗದೇ ಇದ್ದರೆ ಬ್ಯಾಂಕ್‌ಗಳ ಸ್ಥಿತಿಯು ಆಶಾದಾಯಕ ಆಗಿರಲಿದೆ. ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳ ಸರಾಸರಿ ಎನ್‌ಪಿಎ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಿದೆ.

ವೈಯಕ್ತಿಕ ಸಾಲದ ಸರಾಸರಿ ಎನ್‌ಪಿಎ ಆರು ತಿಂಗಳ ಹಿಂದೆ ಇದ್ದ ಮಟ್ಟವನ್ನು ಮೀರಿದೆ ಎಂದು ವರದಿಯು ತಿಳಿಸಿದೆ. ನಿಖರವಾದ ಸಂಖ್ಯೆಯನ್ನು ವರದಿಯಲ್ಲಿ ನೀಡಿಲ್ಲ.

ವಿತ್ತೀಯ ಕೊರತೆ ಗುರಿ ಅನುಮಾನ
ವಿತ್ತೀಯ ಕೊರತೆಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.8ರಲ್ಲಿ ಇರುವಂತೆ ನೋಡಿಕೊಳ್ಳುವುದು ಸರ್ಕಾರಕ್ಕೆ ಸಾಧ್ಯವಾಗದೇ ಇರಬಹುದು ಎಂದು ಆರ್‌ಬಿಐ ಬುಧವಾರ ಹೇಳಿದೆ.‌

ನಿವ್ವಳ ತೆರಿಗೆ ವರಮಾನ ಸಂಗ್ರಹವು ಈವರೆಗೆ ₹ 10.53 ಲಕ್ಷ ಕೋಟಿಗಳಷ್ಟು ಸಂಗ್ರಹ ಆಗಿದೆ. ಹೀಗಿರುವಾಗ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪೂರಕ ಬೇಡಿಕೆಗಳಿಗೆ ₹3.73 ಲಕ್ಷ ಕೋಟಿ ಅನುದಾನ ಒದಗಿಸಲು ಮುಂದಾಗಿರುವುದರಿಂದ ವಿತ್ತೀಯ ಕೊರತೆ ಗುರಿಯನ್ನು ತಲುಪುವುದು ಕಷ್ಟವಾಗಬಹುದು ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.