ADVERTISEMENT

ಜಿಎಸ್‌ಟಿ ಇಳಿಸಲು ಬಿಲ್ಡರ್ಸ್ ಅಸೋಸಿಯೇಷನ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:30 IST
Last Updated 5 ಅಕ್ಟೋಬರ್ 2019, 19:30 IST
   

ಬೆಂಗಳೂರು: ಆರ್ಥಿಕ ಹಿಂಜರಿತ ತೀವ್ರಗೊಳ್ಳುತ್ತಿರುವ ಸದ್ಯದ ಸಂದರ್ಭದಲ್ಲಿ ಹಣಕಾಸು ಪರಿಸ್ಥಿತಿಯನ್ನು ಸುಸ್ಥಿತಿಗೆ ತರಲು ಖಾಸಗಿ ಕಟ್ಟಡಗಳ ನಿರ್ಮಾಣಕ್ಕೆ ವಿಧಿಸುತ್ತಿರುವ ಶೇ 18 ರಷ್ಟು ಜಿಎಸ್‌ಟಿಯನ್ನು ಕಡಿಮೆ ಮಾಡಿ ಸರ್ಕಾರಿ ಕಟ್ಟಡಗಳಿಗೆ ನಿಗದಿಪಡಿಸಿರುವ ಶೇ 12ಕ್ಕೆ ಇಳಿಸಬೇಕು ಎಂದು ಬಿಲ್ಡರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.

ಎಲ್ಲಾ ವಲಯಗಳಂತೆ ನಿರ್ಮಾಣ ವಲಯ ಕೂಡ ತೀವ್ರ ಸಂಕಷ್ಟದಲ್ಲಿದೆ. ಆರ್ಥಿಕ ಪರಿಸ್ಥಿತಿ ಮರಳಿ ಹಳಿಗೆ ತರಲು ಜಿ.ಎಸ್.ಟಿ. ದರದಲ್ಲಿ ಇಳಿಕೆ ಮಾಡಬೇಕು. ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕಾಗಿ ಗುತ್ತಿಗೆದಾರರಿಗೆ ನಿಗದಿಪಡಿಸಿರುವ ಶೇ 12 ರಷ್ಟು ಜಿಎಸ್‌ಟಿಯನ್ನು ಖಾಸಗಿ ಕಟ್ಟಡಗಳನ್ನು ನಿರ್ಮಿಸುವವರಿಗೂ ನಿಗದಿಪಡಿಸಬೇಕು. ಅದರಿಂದ ಬಿಲ್ಡರ್ಸ್‌ಗಳ ಹೊರೆ ಕಡಿಮೆಯಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ ಎಂದು ಅಸೋಸಿಯೇಷನ್ ಅಭಿಪ್ರಾಯಪಟ್ಟಿದೆ.

‘ಯಾವುದೇ ನಿರ್ಮಾಣ ಕ್ಷೇತ್ರದಲ್ಲಿ ಜಿಎಸ್‌ಟಿ ದರ ಕಡಿಮೆ ಮಾಡಿದರೆ ನಿರ್ಮಾಣ ಚಟುವಟಿಕೆಗಳು ತೀವ್ರಗೊಳ್ಳುತ್ತವೆ. ಅದರಿಂದ ಇಟ್ಟಿಗೆ ತಯಾರಿಕೆ, ಸಿಮೆಂಟ್, ಮರಳು, ಜಲ್ಲಿ, ಕಬ್ಬಿಣ ಮತ್ತಿತರ ವಲಯಗಳಿಗೆ ಅನುಕೂಲವಾಗಲಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗಲಿದೆ’ ಎಂದು ಸಂಘದ ಅಧ್ಯಕ್ಷ ವಿಜಯ ರಾಘವ ರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ವಾಣಿಜ್ಯ ಸಂಕೀರ್ಣಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕಾಗಿ ಶೇ 5 ರಷ್ಟು ಜಿಎಸ್‌ಟಿ ನಿಗದಿಪಡಿಸಲಾಗಿದೆ. ಇನ್‌ಪುಟ್ ಕ್ರೆಡಿಟ್‌ನೊಂದಿಗೆ ಜಿಎಸ್‌ಟಿ ಸಲ್ಲಿಸಿದರೆ ಅದು ಶೇ 12ಕ್ಕಿಂತ ಹೆಚ್ಚಾಗುತ್ತದೆ. ಆದ್ದರಿಂದ ಇನ್ ಪುಟ್ ಕ್ರೆಡಿಟ್‌ನೊಂದಿಗೆ ಶೇ 8 ರಿಂದ 12 ರಷ್ಟು ಜಿಎಸ್‌ಟಿ ಪರಿಚಯಿಸಬೇಕಾಗಿದೆ. ಇದು ನಿರ್ಮಾಣ ಚಟುವಟಿಕೆಗಳನ್ನು ಹೆಚ್ಚಿಸಲಿದ್ದು, ಬಿಲ್ಡರ್ಸ್‌ಗಳಿಗೆ ಪರಿಹಾರ ಒದಗಿಸಲಿದೆ. ಅದರಿಂದ ಪ್ಲ್ಯಾಟ್‌ಗಳ ದರ ಶೇ 3 ರಿಂದ ಶೇ 4 ರಷ್ಟು ಅಗ್ಗವಾಗಲಿದೆ’ ಎಂದು ಹೇಳಿದ್ದಾರೆ.

‘ಕಟ್ಟಡ ನಿರ್ಮಾಣ ಗುತ್ತಿಗೆದಾರರಿಂದ ಶೇ 1 ರಷ್ಟು ಸೆಸ್ ಸಂಗ್ರಹಿಸಲಾಗುತ್ತಿದೆ. ₹ 6 ಸಾವಿರ ಕೋಟಿ ಮೊತ್ತದ ಸೆಸ್ ಹಣವನ್ನು ಕಾರ್ಮಿಕರ ಹಿತಾಸಕ್ತಿಗಲ್ಲದೆ, ಸರ್ಕಾರ ಬೇರೆ ಯಾವ ಉದ್ದೇಶಗಳಿಗೂ ಬಳಸಬಾರದು’ ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.