ADVERTISEMENT

GST Collection: ಮೇ ಜಿಎಸ್‌ಟಿ ವರಮಾನ ಸಂಗ್ರಹ ₹2 ಲಕ್ಷ ಕೋಟಿ

ಪಿಟಿಐ
Published 1 ಜೂನ್ 2025, 15:33 IST
Last Updated 1 ಜೂನ್ 2025, 15:33 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಮೂಲಕ ಸಂಗ್ರಹ ಆಗುವ ವರಮಾನವು ಮೇ ತಿಂಗಳಲ್ಲಿ ಶೇಕಡ 16.4ರಷ್ಟು ಹೆಚ್ಚಳ ಆಗಿದ್ದು, ₹2.01 ಲಕ್ಷ ಕೋಟಿಯಷ್ಟು ಆಗಿದೆ. ಜಿಎಸ್‌ಟಿ ವರಮಾನ ಸಂಗ್ರಹವು ಸತತ ಎರಡನೆಯ ತಿಂಗಳಲ್ಲಿಯೂ ₹2 ಲಕ್ಷ ಕೋಟಿಗಿಂತ ಹೆಚ್ಚಾಗಿದೆ.

ಜಿಎಸ್‌ಟಿ ಮೂಲಕ ಸಂಗ್ರಹವಾದ ವರಮಾನದ ಮೊತ್ತವು ಏಪ್ರಿಲ್‌ನಲ್ಲಿ ದಾಖಲೆಯು ₹2.37 ಲಕ್ಷ ಕೋಟಿ ಆಗಿತ್ತು. ಕಳೆದ ವರ್ಷದ ಮೇ ತಿಂಗಳಲ್ಲಿ ಸಂಗ್ರಹವು ₹1.72 ಲಕ್ಷ ಕೋಟಿ ಆಗಿತ್ತು.

ಈ ವರ್ಷದ ಮೇ ತಿಂಗಳಲ್ಲಿ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್‌ಟಿ ವರಮಾನವು ಶೇ 13.7ರಷ್ಟು ಏರಿಕೆ ಕಂಡಿದ್ದು, ಅಂದಾಜು ₹1.50 ಲಕ್ಷ ಕೋಟಿಗೆ ತಲುಪಿದೆ. ಆಮದು ಮೂಲಕ ಬರುವ ಜಿಎಸ್‌ಟಿ ವರಮಾನವು ಶೇ 25.2ರಷ್ಟು ಹೆಚ್ಚಳ ಕಂಡು ₹51 ಸಾವಿರ ಕೋಟಿಗೆ ತಲುಪಿದೆ.

ADVERTISEMENT

ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಜಿಎಸ್‌ಟಿ ವರಮಾನ ಸಂಗ್ರಹದಲ್ಲಿನ ಏರಿಕೆಯು ಶೇ 17ರಿಂದ ಶೇ 25ರವರೆಗೆ ಇದೆ. ಆದರೆ ಈ ರಾಜ್ಯಗಳಂತೆಯೇ ದೊಡ್ಡದಾಗಿರುವ ಗುಜರಾತ್, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಜಿಎಸ್‌ಟಿ ವರಮಾನ ಸಂಗ್ರಹದಲ್ಲಿನ ಹೆಚ್ಚಳವು ಶೇ 6ರವರೆಗೆ ಮಾತ್ರ ಇದೆ.

ಬೇರೆ ಬೇರೆ ರಾಜ್ಯಗಳ ಜಿಎಸ್‌ಟಿ ವರಮಾನ ಸಂಗ್ರಹದ ಏರಿಕೆ ಪ್ರಮಾಣದಲ್ಲಿನ ವ್ಯತ್ಯಾಸದ ವಿಚಾರವಾಗಿ, ಆಯಾ ರಾಜ್ಯಗಳಿಗೆ ಮುಖ್ಯವಾದ ವಲಯಗಳನ್ನು ಗಮನದಲ್ಲಿ ಇರಿಸಿಕೊಂಡು ಆಳವಾದ ಪರಿಶೀಲನೆ ಆಗಬೇಕಿದೆ ಎಂದು ಡೆಲಾಯ್ಟ್‌ ಇಂಡಿಯಾ ಪಾಲುದಾರ ಎಂ.ಎಸ್. ಮಣಿ ಹೇಳಿದ್ದಾರೆ.

ಮಧ್ಯಪ್ರದೇಶ, ಹರಿಯಾಣ, ಪಂಜಾಬ್‌, ರಾಜಸ್ಥಾನದಲ್ಲಿ ವರಮಾನ ಸಂಗ್ರಹದ ಏರಿಕೆ ಪ್ರಮಾಣವು ಶೇ 10ರಷ್ಟು ಇದೆ.

‘ದೇಶದಾದ್ಯಂತ ವರಮಾನ ಏರಿಕೆ ಪ್ರಮಾಣವು ಒಂದೇ ಆಗಿಲ್ಲ. ಇದಕ್ಕೆ ವಲಯವಾರು ಕಾರಣಗಳು ಇರಬಹುದು. ಇದರ ಬಗ್ಗೆ ದತ್ತಾಂಶ ಆಧರಿಸಿ ವಿಶ್ಲೇಷಣೆ ಆಗಬೇಕು’ ಎಂದು ಅವರು ಹೇಳಿದ್ದಾರೆ.

ಜಿಎಸ್‌ಟಿ ವರಮಾನ ಸಂಗ್ರಹದ ಪ್ರಮಾಣವು ಇದೇ ಮಟ್ಟದಲ್ಲಿ ಇನ್ನೂ ಒಂದೆರಡು ತಿಂಗಳು ಮುಂದುವರಿದರೆ, ಜಿಎಸ್‌ಟಿ ದರಗಳನ್ನು ಇನ್ನಷ್ಟು ಸರಳಗೊಳಿಸಲು ಸರ್ಕಾರಕ್ಕೆ ಅನುವಾಗಬಹುದು ಎಂದು ಪಿಡಬ್ಲ್ಯೂಸಿ ಎಲ್‌ಎಲ್‌ಪಿ ಪಾಲುದಾರ ಪ್ರತೀಜ್ ಜೈನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.