ADVERTISEMENT

ಅಕ್ಟೋಬರ್‌ ಜಿಎಸ್‌ಟಿ ಸಂಗ್ರಹ ₹ 1.05 ಲಕ್ಷ ಕೋಟಿ

ಪಿಟಿಐ
Published 2 ನವೆಂಬರ್ 2020, 3:08 IST
Last Updated 2 ನವೆಂಬರ್ 2020, 3:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2020ರ ಫೆಬ್ರುವರಿ ಬಳಿಕ ಜಿಎಸ್‌ಟಿ ಸಂಗ್ರಹವು ಅಕ್ಟೋಬರ್‌ನಲ್ಲಿ ₹ 1 ಲಕ್ಷ ಕೋಟಿಯ ಗಡಿಯನ್ನು ದಾಟಿದೆ. ಅಕ್ಟೋಬರ್‌ನಲ್ಲಿ ಆಗಿರುವ ಜಿಎಸ್‌ಟಿ ಸಂಗ್ರಹ ₹ 1.05 ಲಕ್ಷ ಕೋಟಿ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

2019ರ ಅಕ್ಟೋಬರ್‌ನಲ್ಲಿ ₹ 95,379 ಕೋಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ 2020ರ ಅಕ್ಟೋಬರ್‌ನಲ್ಲಿ ಸಂಗ್ರಹವಾಗಿರುವ ಮೊತ್ತವು ಶೇ 10ರಷ್ಟು ಹೆಚ್ಚಾಗಿದೆ. ಅಕ್ಟೋಬರ್ 31ರ ಅಂತ್ಯದವರೆಗೆ ಒಟ್ಟಾರೆ ಜಿಎಸ್‌ಟಿಆರ್‌–3ಬಿ ಸಲ್ಲಿಕೆಯು 80 ಲಕ್ಷಕ್ಕೆ ತಲುಪಿದೆ.

ಕೇಂದ್ರ ಜಿಎಸ್‌ಟಿಯಿಂದ ₹ 19,193 ಕೋಟಿ, ರಾಜ್ಯ ಜಿಎಸ್‌ಟಿಯಿಂದ ₹5,411 ಕೋಟಿ, ಸಮಗ್ರ ಜಿಎಸ್‌ಟಿಯಿಂದ ₹52,540 ಕೋಟಿ ಹಾಗೂ ಸೆಸ್‌ನಿಂದ ₹8,011 ಕೋಟಿ ಸಂಗ್ರಹವಾಗಿದೆ ಎಂದು ಸಚಿವಾಲಯ ಹೇಳಿದೆ.

ADVERTISEMENT

‘ತೆರಿಗೆ ಸಂಗ್ರಹವು ಚೇತರಿಕೆ ಕಂಡುಕೊಳ್ಳುತ್ತಿರುವುದಷ್ಟೇ ಅಲ್ಲದೆ ಏರಿಕೆಯೂ ಆಗುತ್ತಿದೆ. 2019ರ ಸೆಪ್ಟೆಂಬರ್‌ಗೆ ಹೋಲಿಸಿದರೆ 2020ರ ಸೆಪ್ಟೆಂಬರ್‌ನಲ್ಲಿ ಶೇ 4ರಷ್ಟು ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ’ ಎಂದು ಹಣಕಾಸು ಕಾರ್ಯದರ್ಶಿ ಅಜಯ್‌ ಭೂಷಣ್ ಪಾಂಡೆ ತಿಳಿಸಿದ್ದಾರೆ.

ಗ್ರಾಹಕರ ಖರೀದಿ ಸಾಮರ್ಥ್ಯದಲ್ಲಿ ಚೇತರಿಕೆ ಹಾಗೂ ಹಬ್ಬದ ವೆಚ್ಚವು ಹೆಚ್ಚಾಗಿರುವುದನ್ನು ತೆರಿಗೆ ಸಂಗ್ರಹದ ಅಂಕಿ–ಅಂಶಗಳು ಸೂಚಿಸುತ್ತಿವೆ ಎಂದು ಡೆಲಾಯ್ಟ್‌ ಕಂಪನಿಯ ಹಿರಿಯ ನಿರ್ದೇಶಕ ಎಂ.ಎಸ್‌. ಮಣಿ ಹೇಳಿದ್ದಾರೆ.

ತೆರಿಗೆ ಸಂಗ್ರಹದಲ್ಲಿನ ಹೆಚ್ಚಳವು ಇದೇ ರೀತಿಯಲ್ಲಿ ಮುಂದುವರಿದರೆ ವಿತ್ತೀಯ ಕೊರತೆಯನ್ನು ತಗ್ಗಿಸಲು ನೆರವಾಗಲಿದೆ. ಎಲ್ಲಾ ವಲಯಗಳಲ್ಲಿಯೂ ವಾಹಿವಾಟಿನ ಬಗೆಗಿನ ವಿಶ್ವಾಸದಲ್ಲಿ ಚೇತರಿಕೆ ಕಂಡುಬರಲಿದೆ ಎಂದೂ ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ತೆರಿಗೆ ಸಂಗ್ರಹ ₹ 1 ಲಕ್ಷ ಕೋಟಿ ದಾಟಿರುವುದು ಅಚ್ಚರಿಯೇನಲ್ಲ. ಹಬ್ಬದ ಸಂದರ್ಭವಾದ ನವೆಂಬರ್‌ನಲ್ಲಿಯೂ ಜಿಎಸ್‌ಟಿ ಸಂಗ್ರಹ ಉತ್ತಮವಾಗಿರಲಿದೆ. ನವೆಂಬರ್‌ ನಂತರವೂ ತೆರಿಗೆ ಸಂಗ್ರಹದಲ್ಲಿನ ಹೆಚ್ಚಳದ ಪ್ರಮಾಣ ಇದೇ ರೀತಿ ಮುಂದುವರಿಯುವುದೇ ಎನ್ನುವುದನ್ನು ನೋಡಬೇಕಿದೆ ಎಂದು ಪಿಡಬ್ಲ್ಯುಸಿ ಇಂಡಿಯಾದ ಪಾಲುದಾರ ಪ್ರತೀಕ್ ಜೈನ್‌ ಹೇಳಿದ್ದಾರೆ.

ತಿಂಗಳವಾರು ವಿವರ

ಫೆಬ್ರುವರಿ;₹1.05 ಲಕ್ಷ ಕೋಟಿ

ಮಾರ್ಚ್‌;₹97,597 ಕೋಟಿ

ಏಪ್ರಿಲ್‌;₹32,172 ಕೋಟಿ

ಮೇ;₹62,151 ಕೋಟಿ

ಜೂನ್‌;₹90,917 ಕೋಟಿ

ಜುಲೈ;₹87,422 ಕೋಟಿ

ಆಗಸ್ಟ್‌;₹86,449 ಕೋಟಿ

ಸೆಪ್ಟೆಂಬರ್‌;₹95,480 ಕೋಟಿ

ಅಕ್ಟೋಬರ್‌;₹1.05 ಲಕ್ಷ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.