ADVERTISEMENT

ಇ–ವೇದಿಕೆಗಳ ಬೆಲೆ ನಿಗದಿ ಮೇಲೆ ನಿಗಾ: ಕೇಂದ್ರದ ವಿವರಣೆ

ಜಿಎಸ್‌ಟಿ ದರ ಪರಿಷ್ಕರಣೆಯ ಪ್ರಯೋಜನ ವರ್ಗಾವಣೆ: ಕೇಂದ್ರದ ವಿವರಣೆ

ಪಿಟಿಐ
Published 23 ಸೆಪ್ಟೆಂಬರ್ 2025, 15:53 IST
Last Updated 23 ಸೆಪ್ಟೆಂಬರ್ 2025, 15:53 IST
<div class="paragraphs"><p> GST </p></div>

GST

   

ನವದೆಹಲಿ: ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಮೇಲಿನ ಜಿಎಸ್‌ಟಿ ಪರಿಷ್ಕರಣೆಯ ಪ್ರಯೋಜನವನ್ನು ಇ–ವಾಣಿಜ್ಯ ವೇದಿಕೆಗಳು ಗ್ರಾಹಕರಿಗೆ ವರ್ಗಾವಣೆ ಮಾಡಿವೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರ ಗಮನ ಇರಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಕೆಲವು ಇ–ವಾಣಿಜ್ಯ ವೇದಿಕೆಗಳು ತಮ್ಮ ಮೂಲಕ ಮಾರಾಟ ಆಗುತ್ತಿರುವ ನಿತ್ಯ ಬಳಕೆಯ ಉತ್ಪನ್ನಗಳ ಮೇಲಿನ ಬೆಲೆಯನ್ನು ಜಿಎಸ್‌ಟಿ ಇಳಿಕೆಗೆ ಅನುಗುಣವಾಗಿ ಪರಿಷ್ಕರಿಸಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ, ಬೆಲೆಯಲ್ಲಿನ ಬದಲಾವಣೆಗಳ ಬಗ್ಗೆ ಕಣ್ಣಿಡಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ADVERTISEMENT

‘ನಾವು ಬೆಲೆಯಲ್ಲಿನ ಬದಲಾವಣೆಗಳನ್ನು ಗಮನಿಸುತ್ತಿದ್ದೇವೆ. ಸೆಪ್ಟೆಂಬರ್‌ 30ಕ್ಕೆ ಮೊದಲು ಪ್ರಥಮ ವರದಿಯು ಸಿಗಲಿದೆ’ ಎಂದು ಮೂಲವೊಂದು ಹೇಳಿದೆ. ಇಂತಹ ದೂರುಗಳಿಗೆ ಹಠಾತ್ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮೂಲವು ಸ್ಪಷ್ಟಪಡಿಸಿದೆ.

ಲಾಭಕೋರತನಕ್ಕೆ ಯಾವುದೇ ಕಂಪನಿ, ಮಾರಾಟಗಾರ ಮುಂದಾದರೆ ಅದನ್ನು ತಡೆಯುವ ಪ್ರತ್ಯೇಕ ವ್ಯವಸ್ಥೆಯು ರೂಪುಗೊಂಡಿಲ್ಲವಾದರೂ, ಬೆಲೆ ನಿಗದಿಯ ಮೇಲೆ ಕೇಂದ್ರವು ಕಣ್ಣಿರಿಸಿದೆ. ಜಿಎಸ್‌ಟಿ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುತ್ತಿರುವುದಾಗಿ ಹಲವಾರು ಕಂಪನಿಗಳು ಹೇಳಿವೆ.

ವ್ಯಾಪಕವಾಗಿ ಬಳಕೆಯಾಗುವ 54 ಉತ್ಪನ್ನಗಳ ಬೆಲೆಯಲ್ಲಿ ಆಗುವ ಬದಲಾವಣೆ ಬಗ್ಗೆ ಪ್ರತಿ ತಿಂಗಳೂ ವರದಿ ನೀಡಬೇಕು ಎಂದು ಕೇಂದ್ರ ಜಿಎಸ್‌ಟಿ ಕ್ಷೇತ್ರ ಅಧಿಕಾರಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯವು ಸೆಪ್ಟೆಂಬರ್‌ 9ರಂದು ಸೂಚಿಸಿದೆ.

ಈ ಸೂಚನೆಗೆ ಸಂಬಂಧಿಸಿದ ಮೊದಲ ವರದಿಯನ್ನು ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಸೆಪ್ಟೆಂಬರ್‌ 30ಕ್ಕೆ ಮೊದಲು ಸಲ್ಲಿಸಬೇಕಿದೆ. ವರದಿಯು ಬ್ರ್ಯಾಂಡ್‌ವಾರು ಸರಕುಗಳ ತುಲನಾತ್ಮಕ ಎಂಆರ್‌ಪಿ ವಿವರವನ್ನು ಒಳಗೊಳ್ಳಬೇಕಿದೆ.

ಬೆಣ್ಣೆ, ಶಾಂಪೂ, ಟೂತ್‌ಪೇಸ್ಟ್‌, ಟೊಮಾಟೊ ಕೆಚಪ್, ಜಾಮ್, ಐಸ್ ಕ್ರೀಂ, ಹವಾನಿಯಂತ್ರಕಗಳು, ಟಿ.ವಿ., ರೋಗಪತ್ತೆ ಉಪಕರಣಗಳು, ಸಿಮೆಂಟ್‌ ಸೇರಿದಂತೆ ಒಟ್ಟು 54 ವಸ್ತುಗಳ ಬಗ್ಗೆ ವರದಿಯು ವಿವರ ಒದಗಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.