ADVERTISEMENT

ಜಿಎಸ್‌ಟಿ ಕಡಿತ ನಿರೀಕ್ಷೆ; ವಾಹನ ರವಾನೆ ಇಳಿಕೆ

ಪಿಟಿಐ
Published 1 ಸೆಪ್ಟೆಂಬರ್ 2025, 13:55 IST
Last Updated 1 ಸೆಪ್ಟೆಂಬರ್ 2025, 13:55 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಟಾಟಾ ಮೋಟರ್ಸ್‌ ಡೀಲರ್‌ಗಳಿಗೆ ರವಾನಿಸಿದ ವಾಹನಗಳ ಸಂಖ್ಯೆಯು ಆಗಸ್ಟ್‌ನಲ್ಲಿ ಇಳಿಕೆಯಾಗಿದೆ.

ವಾಹನಗಳಿಗೆ ಜಿಎಸ್‌ಟಿ ವ್ಯವಸ್ಥೆಯ ಅಡಿ ಪ್ರಸ್ತುತ ವಿಧಿಸಲಾಗುತ್ತಿರುವ ಶೇ 28ರ ತೆರಿಗೆ ದರ ತಗ್ಗಬಹುದು ಎಂಬ ನಿರೀಕ್ಷೆಯಿಂದ ಬಹುತೇಕ ಖರೀದಿದಾರರು ವಾಹನಗಳ ಖರೀದಿಯನ್ನು ಮುಂದೂಡಿರುವುದು ವಾಹನಗಳ ರವಾನೆ ಕಡಿಮೆಯಾಗಲು ಕಾರಣ ಎನ್ನಲಾಗಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮಾರುತಿ ಸುಜುಕಿ ಕಂಪನಿಯು ಡೀಲರ್‌ಗಳಿಗೆ 1,43,075 ಪ್ರಯಾಣಿಕ ವಾಹನಗಳನ್ನು ಕಳುಹಿಸಿತ್ತು. ಈ ಬಾರಿ ಅದು 1,31,278 ವಾಹನಗಳನ್ನು ಕಳುಹಿಸಿದ್ದು, ಶೇ 8ರಷ್ಟು ಇಳಿಕೆ ಆಗಿದೆ.

ADVERTISEMENT

ಹುಂಡೈ ಮೋಟರ್ ಇಂಡಿಯಾದ ರವಾನೆಯಲ್ಲಿ ಶೇ 11ರಷ್ಟು ಇಳಿಕೆಯಾಗಿದ್ದು, 44,001 ವಾಹನ ರವಾನೆ ಆಗಿದೆ. ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಟಾಟಾ ಮೋಟರ್ಸ್‌ ಕಡೆಯಿಂದ ಆಗಿರುವ ರವಾನೆಯು ಕ್ರಮವಾಗಿ ಶೇ 9 ಮತ್ತು ಶೇ 7ರಷ್ಟು ಕಡಿಮೆಯಾಗಿದೆ. 

ಈಗ ನಾಲ್ಕು ಹಂತಗಳ (ಶೇ 5, ಶೇ 12, ಶೇ 18 ಮತ್ತು ಶೇ 28) ಜಿಎಸ್‌ಟಿ ಇದೆ. ವಾಹನಗಳಿಗೆ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ನಾಲ್ಕು ಹಂತಗಳ ತೆರಿಗೆ ವ್ಯವಸ್ಥೆಯನ್ನು ಎರಡು ಹಂತಗಳಿಗೆ ಇಳಿಸಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ವಾಹನ ಖರೀದಿಸಲು ಖರೀದಿದಾರರು ತಡ ಮಾಡುತ್ತಿದ್ದಾರೆ. ಇದೇ ರವಾನೆ ಪ್ರಮಾಣ ಕಡಿಮೆ ಆಗಲು ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.