ADVERTISEMENT

ಜಿಎಸ್‌ಟಿ: ₹1.95 ಲಕ್ಷ ಕೋಟಿ ವಂಚನೆ

ಪಿಟಿಐ
Published 10 ಮಾರ್ಚ್ 2025, 15:47 IST
Last Updated 10 ಮಾರ್ಚ್ 2025, 15:47 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

ನವದೆಹಲಿ: 2024–25ನೇ ಆರ್ಥಿಕ ವರ್ಷದ ಏಪ್ರಿಲ್‌–ಜನವರಿಯಲ್ಲಿ ಕೇಂದ್ರದ ಜಿಎಸ್‌ಟಿ ಅಧಿಕಾರಿಗಳು ₹1.95 ಲಕ್ಷ ಕೋಟಿ ಮೊತ್ತದ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಸೋಮವಾರ ತಿಳಿಸಿದೆ.

ಕಳೆದ ಐದು ವರ್ಷಗಳಲ್ಲಿ 86,711 ವಂಚನೆ ಪ್ರಕರಣ ಪತ್ತೆಯಾಗಿದ್ದು, ಇದರ ಒಟ್ಟು ಮೊತ್ತ ₹6.79 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಸಕ್ತ ಆರ್ಥಿಕ ವರ್ಷದಿಂದ ಜನವರಿವರೆಗೆ ಒಟ್ಟು 25,397 ವಂಚನೆ ಪ್ರಕರಣಗಳು ಪತ್ತೆ ಆಗಿವೆ. ವಂಚನೆಯ ಮೊತ್ತ ₹1.95 ಲಕ್ಷ ಕೋಟಿಯಷ್ಟಾಗಿದ್ದು, ಈ ಪೈಕಿ ₹21,520 ಕೋಟಿ ಜಮೆ ಆಗುವಂತೆ ನೋಡಿಕೊಳ್ಳಲಾಗಿದೆ ಎಂದು ವಿವರಿಸಿದೆ.

ಇದೇ ಅವಧಿಯಲ್ಲಿ ಒಟ್ಟು 13,018 ನಕಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಪ್ರಕರಣ ಪತ್ತೆ ಹಚ್ಚಲಾಗಿದ್ದು, ಇದರ ಮೊತ್ತ ₹46,472 ಕೋಟಿಯಾಗಿದೆ. ₹2,211 ಕೋಟಿ ಮಾತ್ರ ಪಾವತಿಯಾಗಿದೆ. 

2023–24ರ ಆರ್ಥಿಕ ವರ್ಷದಲ್ಲಿ ₹2.30 ಲಕ್ಷ ಕೋಟಿ ಮೌಲ್ಯದ 20,582 ವಂಚನೆ ಪ್ರಕರಣಗಳು ಪತ್ತೆ ಆಗಿವೆ. 2022–23ರಲ್ಲಿ ₹1.32 ಲಕ್ಷ ಕೋಟಿ, 2021–22ರಲ್ಲಿ ₹73,238 ಕೋಟಿ ಮತ್ತು 2020–21ರಲ್ಲಿ ₹49,384 ಕೋಟಿ ಮೊತ್ತದ ಜಿಎಸ್‌ಟಿ ವಂಚನೆ ಪ್ರಕರಣಗಳು ನಡೆದಿದ್ದವು ಎಂದು ಸರ್ಕಾರ ತಿಳಿಸಿದೆ.

‘ತೆರಿಗೆ ವಂಚನೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತು ಜಿಎಸ್‌ಟಿಎನ್ ವಿವಿಧ ಕ್ರಮಗಳನ್ನು ತೆಗೆದುಕೊಂಡಿವೆ’ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.