ಜಿಎಸ್‌ಟಿ
ನವದೆಹಲಿ: ಪ‍್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹15,851 ಕೋಟಿ ಮೊತ್ತದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಕ್ಲೇಮ್ ಪ್ರಕರಣಗಳನ್ನು ಜಿಎಸ್‌ಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಜಿಎಸ್‌ಟಿ ಅಧಿಕಾರಿಗಳು ಒಟ್ಟು 3,840 ನಕಲಿ ಕಂಪನಿಗಳಿಗೆ ಸಂಬಂಧಿಸಿ ₹12,304 ಕೋಟಿ ಮೊತ್ತದ ನಕಲಿ ಐಟಿಸಿ ಪ್ರಕರಣಗಳನ್ನು ಪತ್ತೆ ಮಾಡಿದ್ದರು. ಈ ಪೈಕಿ ₹549 ಕೋಟಿ ವಶಕ್ಕೆ ಪಡೆದು, 26 ಜನರನ್ನು ಬಂಧಿಸಲಾಗಿತ್ತು.
ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹15,851 ಕೋಟಿ ಮೊತ್ತದ ವಂಚನೆ ಬೆಳಕಿಗೆ ಬಂದಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ 29ರಷ್ಟು ಅಧಿಕ. ವಂಚನೆಯಲ್ಲಿ ತೊಡಗಿದ್ದ 3,558 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿದೆ. ₹659 ಕೋಟಿ ವಶಪಡಿಸಿಕೊಳ್ಳಲಾಗಿದ್ದು, 53 ಜನರನ್ನು ಬಂಧಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ತ್ರೈಮಾಸಿಕದಲ್ಲಿ ಪ್ರತಿ ತಿಂಗಳು ಸರಾಸರಿ 1,200 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ, ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಕಲಿ ಕಂಪನಿಗಳ ಪತ್ತೆ ಸಂಖ್ಯೆ ಕಡಿಮೆ ಆಗಿದೆ. ಇದು ನಕಲಿ ಜಿಎಸ್‌ಟಿ ನೋಂದಣಿ ವಿರುದ್ಧ ಇಲಾಖೆಯು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
2024–25ರ ಆರ್ಥಿಕ ವರ್ಷದಲ್ಲಿ 25,009 ನಕಲಿ ಕಂಪನಿಗಳ ₹61,545 ಕೋಟಿ ಮೊತ್ತದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪತ್ತೆ ಹಚ್ಚಲಾಗಿತ್ತು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳು ದೇಶದಾದ್ಯಂತ ಈಗಾಗಲೇ ಎರಡು ಬಾರಿ ಜಿಎಸ್‌ಟಿ ನಕಲಿ ನೋಂದಣಿ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ.
ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಧ್ಯಕ್ಷತೆಯಲ್ಲಿ ರಾಜ್ಯಗಳ ಹಣಕಾಸು ಸಚಿವರ ಸಮಿತಿ, ತೆರಿಗೆ ವಂಚನೆ ಮತ್ತು ಐಟಿಸಿ ವಂಚನೆ ಕುರಿತು ಅಧ್ಯಯನ ಮಾಡುತ್ತಿದೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.