ADVERTISEMENT

₹ 250 ಕೋಟಿ ಮೌಲ್ಯದ ಜಿಎಸ್‌ಟಿ ವಂಚನೆ

ಗ್ರಾಹಕರಿಗೆ ದರ ಕಡಿತದ ಲಾಭ ವರ್ಗಾಯಿಸದ ಪಿಆ್ಯಂಡ್‌ಜಿ ಇಂಡಿಯಾ ಸಂಸ್ಥೆ

ಪಿಟಿಐ
Published 23 ಏಪ್ರಿಲ್ 2019, 17:11 IST
Last Updated 23 ಏಪ್ರಿಲ್ 2019, 17:11 IST

ನವದೆಹಲಿ: ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಪ್ರಮುಖ ಸಂಸ್ಥೆ ಪಿಆ್ಯಂಡ್‌ಜಿ ಇಂಡಿಯಾ, ಜಿಎಸ್‌ಟಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ₹ 250 ಕೋಟಿ ವಂಚನೆ ಎಸಗಿದೆ ಎಂದು ಜಿಎಸ್‌ಟಿ ಲಾಭಕೋರತನ ತಡೆಗೆ ಇರುವ ತನಿಖಾ ತಂಡ ತಿಳಿಸಿದೆ.

ಲಾಭಕೋರತನ ತಡೆ ಮಹಾನಿರ್ದೇಶನಾಲಯದ (ಡಿಜಿಎಪಿ) ಸ್ಥಾಯಿ ಸಮಿತಿಗೆ ಬಂದಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ 2017ರ ನವೆಂಬರ್‌ 15ಕ್ಕೂ ಮುನ್ನ ಮತ್ತು ನಂತರ ಈ ವಂಚನೆ ನಡೆಸಿರುವುದು ತಿಳಿದುಬಂದಿದೆ.

ಜಿಎಸ್‌ಟಿ ಮಂಡಳಿಯು ಕೆಲವು ಸರಕುಗಳನ್ನು ಶೇ 28ರ ವ್ಯಾಪ್ತಿಯಿಂದ ಶೇ 18ರ ವ್ಯಾಪ್ತಿಗೆ ತಂದಿತ್ತು. ಆದರೆ, ಸಂಸ್ಥೆಯು ತೆರಿಗೆ ದರದಲ್ಲಿ ಇಳಿಕೆ ಮಾಡಿಲ್ಲ.

ADVERTISEMENT

ಈ ಕುರಿತು ಕಂಪನಿಯ ಅಭಿಪ್ರಾಯ ಕೇಳಿದ ಬಳಿಕ ಲಾಭಕೋರತನ ತಡೆ ರಾಷ್ಟ್ರೀಯ ಪ್ರಾಧಿಕಾರ ಅಂತಿಮ ಆದೇಶ ಹೊರಡಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಜವಾಬ್ದಾರಿಯುತ ಕಾರ್ಪೊರೇಟ್‌ ಸಂಸ್ಥೆಯಾಗಿ ಜಿಎಸ್‌ಟಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಗ್ರಾಹಕರು, ಮಾರಾಟಗಾರರು ಮತ್ತು ಚಿಲ್ಲರೆ ವರ್ತಕರಲ್ಲಿ ಅರಿವು ಮೂಡಿಸಲು ಸಮೂಹ ಮಾಧ್ಯಮಗಳಲ್ಲಿ ಜಾಹೀರಾತು ಸಹ ನೀಡಲಾಗಿದೆ’ ಎಂದು ಸಂಸ್ಥೆಯ ವಕ್ತಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಜಿಎಸ್‌ಟಿ ದರ ಕಡಿತದ ಲಾಭ ವರ್ಗಾಯಿಸುವಲ್ಲಿ ಸಂಸ್ಥೆ ಅನುಸರಿಸಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ಸೂಚಿಸುವ ವಿಶ್ವಾಸವಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.